ADVERTISEMENT

ಗಲಾಟೆ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:23 IST
Last Updated 1 ಡಿಸೆಂಬರ್ 2020, 3:23 IST

ಚಿಂತಾಮಣಿ: ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚೇಪಲ್ಲಿ ಗ್ರಾಮದ ಬಳಿ ಇಬ್ಬರು ಅಲೆಮಾರಿ ವ್ಯಕ್ತಿಗಳ ನಡುವೆ ಕುಡಿದ ಮತ್ತಿನಲ್ಲಿ ನಡೆದ ಘರ್ಷಣೆ ಒಬ್ಬನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.

ಆಂಧ್ರಪ್ರದೇಶದ ಗಂದೋಡ್ಲಪಲ್ಲಿ ಗ್ರಾಮದ ಶ್ರೀರಾಮುಲು(50) ಕೊಲೆಯಾದ ವ್ಯಕ್ತಿ. ಕೆಂಚೇಪಲ್ಲಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದರು. ಚಿಂದಿ, ಪ್ಲಾಸ್ಟಿಕ್, ಪೇಪರ್ ವಸ್ತುಗಳನ್ನು ಆಯ್ದು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶನಿವಾರ ರಾತ್ರಿ ಕುಡಿದು ಗಲಾಟೆ ಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ.

ದೇವಸ್ಥಾನದ ಬಳಿ ಕೂಗಾಟ, ಕಿರುಚಾಟ ಕೇಳಿ ಗ್ರಾಮಸ್ಥರು ಧಾವಿಸಿ ಬಂದಿದ್ದಾರೆ. ಕೆಲವರು ಓಡಿಹೋಗಿದ್ದಾರೆ. ಒಬ್ಬ ವ್ಯಕ್ತಿಯ ತಲೆಗೆ ತೀವ್ರವಾಗಿ ಗಾಯವಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎಂದು ಗ್ರಾಮಸ್ಥ ರಾಮಾಂಜಿನೇಯಲು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಗಾಯಾಳುವನ್ನು ತಕ್ಷಣ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದೆವು. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಆರೋಪಿ ಚಂದ್ರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅವರ ಸ್ವಂತ ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ. ಕೊಲೆಯಾದ ವ್ಯಕ್ತಿಯ ಮಗನನ್ನು ಚಿಕ್ಕಬಳ್ಳಾಪುರದ ರಿವಾರ್ಡ್ ಸ್ವಯಂಸೇವಾ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.