ADVERTISEMENT

ಹಠಯೋಗಿ ಸಾಯಿ ಸ್ವಾಮೀಜಿಯ ಯೋಗ ಸಮಾಧಿ: ಪೊಲೀಸರ ತಡೆ

ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್‌ ಅವರ ಜಮೀನಿನಲ್ಲಿ ಸಿದ್ಧತೆ, ಸಮಾಧಿ ಪ್ರವೇಶಕ್ಕೆ ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 14:26 IST
Last Updated 27 ಜನವರಿ 2020, 14:26 IST
ತಾರನೇಯ ಸಾಯಿ ಸ್ವಾಮೀಜಿ
ತಾರನೇಯ ಸಾಯಿ ಸ್ವಾಮೀಜಿ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್‌ ಅವರ ಜಮೀನಿನಲ್ಲಿ ನೆರೆಯ ಆಂಧ್ರಪ್ರದೇಶದ ಪುಟ್ಟಪರ್ತಿ ಮೂಲದ ಹಠಯೋಗಿ ತಾರನೇಯ ಸಾಯಿ ಸ್ವಾಮೀಜಿ ಸೋಮವಾರ ಕೈಗೊಳ್ಳಲು ಉದ್ದೇಶಿಸಿದ್ದ ಯೋಗ ಸಮಾಧಿಗೆ ಪೊಲೀಸರು ಅವಕಾಶ ನೀಡಲಿಲ್ಲ.

ವೆಂಕಟೇಶ್ ಅವರ ಜಮೀನಿನಲ್ಲಿ ನಿರ್ಮಿಸಲಾದ 9 ಅಡಿ ಚೌಕಾಕಾರದ ಆಳದ ಗುಂಡಿಯ ಒಳಗೆ ಸ್ವಾಮೀಜಿ ಸೋಮವಾರ (ಜ.27) ಬೆಳಿಗ್ಗೆ 11.30 ರಿಂದ ಜನವರಿ 30ರ ಬೆಳಿಗ್ಗೆ 11.30ರ ವರೆಗೆ ಸುಮಾರು 72 ಗಂಟೆಗಳ ಕಾಲ ಯೋಗ ಸಮಾಧಿ ನಡೆಸಲಿದ್ದಾರೆ ಎಂದು ಕೆಲ ದಿನಗಳ ಹಿಂದೆಯೇ ಕರಪತ್ರದ ಮೂಲಕ ಪ್ರಚಾರ ಮಾಡಲಾಗಿತ್ತು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿತ್ತು.

ಯೋಗ ಸಮಾಧಿಗಾಗಿ ಭಾನುವಾರ ವೆಂಕಟೇಶ್‌ ಅವರ ಜಮೀನಿನಲ್ಲಿ ಗುಂಡಿಯನ್ನು ಸಿದ್ಧಗೊಳಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಚಿಕ್ಕನಹಳ್ಳಿಗೆ ಬಂದ ನಂದಿ ಠಾಣೆ ಪೊಲೀಸರು ಸ್ವಾಮೀಜಿಗೆ ಯೋಗ ಸಮಾಧಿ ನಡೆಸಲು ಅನುಮತಿ ನೀಡದೆ ಅಲ್ಲಿಂದ ವಾಪಾಸ್‌ ಕಳುಹಿಸಿದರು. ಜತೆಗೆ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ವೆಂಕಟೇಶ್‌ ಅವರ ಕುಟುಂಬದವರಿಗೆ ಸೂಚನೆ ನೀಡಿದರು.

ADVERTISEMENT

‘ಯೋಗ ಸಮಾಧಿಗೆ ಎಲ್ಲ ಸಿದ್ಧತೆಯಾಗಿತ್ತು. ಆದರೆ ಬೆಳಿಗ್ಗೆ 7ಕ್ಕೆ ಜಮೀನಿನ ಬಳಿ ಬಂದ ಪೊಲೀಸರು ಅನುಮತಿ ಪಡೆಯದೆ ಯೋಗ ಸಮಾಧಿ ನಡೆಸುವುದು ಕಾನೂನು ಬಾಹೀರ ಎಂದು ಹೇಳಿ ಅವಕಾಶ ನೀಡಲಿಲ್ಲ. ಹೀಗಾಗಿ, ಸ್ವಾಮೀಜಿ ವಾಪಸ್‌ ಪುಟ್ಟಪರ್ತಿಗೆ ಹೊರಟರು’ ಎಂದು ವೆಂಕಟೇಶ್‌ ಅವರು ತಿಳಿಸಿದರು.

‘ತಾರನೇಯ ಸಾಯಿ ಸ್ವಾಮೀಜಿ ಅವರು ಆಗಾಗ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಬರುತ್ತಿದ್ದರು. ಎರಡು ವರ್ಷಗಳ ಹಿಂದೆ ನಮ್ಮ ಮಗ ತೀರಿಕೊಂಡ ಕಾರಣ ನಾವು ಮಾನಸಿಕ ನೆಮ್ಮದಿ ಅರಸಿ ಆಗಾಗ ಸತ್ಯಸಾಯಿ ಗ್ರಾಮಕ್ಕೆ ಹೋಗುತ್ತಿದ್ದೆವು. ಅಲ್ಲಿ ಸ್ವಾಮೀಜಿ ಅವರ ಪರಿಚಯವಾಗಿತ್ತು. ಅವರು ನಮ್ಮ ಜಮೀನಿನಲ್ಲಿ ಯೋಗ ಸಮಾಧಿ ನಡೆಸುವ ಜತೆಗೆ ಶಿವನ ದೇವಾಲಯ, ಯೋಗ, ಧ್ಯಾನ ಕೇಂದ್ರ ನಿರ್ಮಿಸುವ ಬಗ್ಗೆ ಸಲಹೆ ನೀಡಿದ್ದರು. ಅದಕ್ಕೆ ನಾವು ಸಹ ಒಪ್ಪಿಕೊಂಡಿದ್ದೆವು. ಆದರೆ ನಮಗೆ ಕಾನೂನುಗಳ ಬಗ್ಗೆ ಗೊತ್ತಿರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.