ADVERTISEMENT

ಮೃತ್ಯುಕೂಪವಾದ ರಸ್ತೆ; ಜೀವಕ್ಕೆ ಇಲ್ಲಿಲ್ಲ ಬೆಲೆ

ಕೋಟ್ಯಂತರ ರೂಪಾಯಿ ವ್ಯಯಿಸಿ ಅವೈಜ್ಞಾನಿಕ ರಸ್ತೆ ಕಾಮಗಾರಿ: ಲೋಕಾಯುಕ್ತ ತನಿಖೆಗೆ ನಾಗರಿಕರ ಆಗ್ರಹ

ಪಿ.ಎಸ್.ರಾಜೇಶ್
Published 11 ನವೆಂಬರ್ 2020, 7:31 IST
Last Updated 11 ನವೆಂಬರ್ 2020, 7:31 IST
ತಿಮ್ಮಂಪಲ್ಲಿ ಗ್ರಾಮದ ದೇವಾಲಯದ ಬಳಿಯ ರಸ್ತೆಯಲ್ಲಿರುವ ಗುಂಡಿ
ತಿಮ್ಮಂಪಲ್ಲಿ ಗ್ರಾಮದ ದೇವಾಲಯದ ಬಳಿಯ ರಸ್ತೆಯಲ್ಲಿರುವ ಗುಂಡಿ   

ಬಾಗೇಪಲ್ಲಿ: ಗೂಳೂರು-ತಿಮ್ಮಂಪಲ್ಲಿ-ಬಿಳ್ಳೂರು ರಸ್ತೆಯು ಅಕ್ಷರಶಃ ಮೃತ್ಯುಕೂಪವಾಗಿದೆ. ಪ್ರತಿದಿನ ಹತ್ತಾರು ಜನರು ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ.

ಈ ರಸ್ತೆಯಲ್ಲಿ ಜನರ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂಬುದು ನಾಗರಿಕರ ಆಗ್ರಹ.

ತಾಲ್ಲೂಕಿನ ಪ್ರಮುಖ ರಸ್ತೆಯಾಗಿರುವ ಬಾಗೇಪಲ್ಲಿ-ಗೂಳೂರು-ಬಿಳ್ಳೂರು ರಸ್ತೆ ದಶಕಗಳಿಂದಲೂ ಗುಂಡಿಗಳನ್ನು ಹೊದ್ದು ಮಲಗಿದೆ. ಸರ್ಕಾರಗಳು ಬದಲಾದರೂ ಈ ಗುಂಡಿಗಳಿಗೆ ಮಾತ್ರ ಮುಕ್ತಿ ದೊರೆತಿಲ್ಲ. ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ನಿರಂತರವಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.

ADVERTISEMENT

ಗೂಳೂರು ಹೋಬಳಿಯ ಮದ್ದಲಖಾನದಿಂದ ತಿಮ್ಮಂಪಲ್ಲಿವರೆಗೂ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗಿದೆ. ಬ್ರಾಹ್ಮಣರಹಳ್ಳಿ, ದೊರಣಾಲಪಲ್ಲಿ, ನರವಾಲಪಲ್ಲಿ, ಕನಂಪಲ್ಲಿ, ತಿಮ್ಮಂಪಲ್ಲಿ ಮಾರ್ಗದ ಮೂಲಕ ಜಿ. ಮದ್ದೇಪಲ್ಲಿಯಿಂದ ಬಿಳ್ಳೂರು, ಚಾಕವೇಲು, ಪುಲಗಲ್, ಚೇಳೂರಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಉಳಿದಂತೆ ಆಂಧ್ರಪ್ರದೇಶದ ಮಮದಾಬಾದ್, ಓಡಿಸಿ, ಅಮಡಗೂರು, ಕದಿರಿ, ಕಡಪ ಕಡೆಗೂ ಈ ಮಾರ್ಗವಾಗಿಯೇ ಸಂಚರಿಸಬಹುದು. ಬಾಗೇಪಲ್ಲಿಯಿಂದ ಆಂಧ್ರಪ್ರದೇಶದ ಕಡೆಗೆ ಕಡಿಮೆ ಅವಧಿಯಲ್ಲಿ ಸಂಚರಿಸಬಹುದಾದ ರಸ್ತೆ ಇದಾಗಿದೆ.

ಬಾಗೇಪಲ್ಲಿಯಿಂದ ಗೂಳೂರು, ತಿಮ್ಮಂಪಲ್ಲಿ, ಬಿಳ್ಳೂರು ಕಡೆಗೆ ಸಂಚರಿಸುವ ಮಾರ್ಗದ ರಸ್ತೆ ಮೃತ್ಯುಕೂಪವಾಗಿದೆ. ರಸ್ತೆಯ ಅಂಚಿಗೆ ಬಿಳಿಬಣ್ಣವನ್ನೂ ಹಾಕಲಾಗಿದೆ. ದೂರದಿಂದ ನೋಡಿದರೆ ನವ ವಧುವಿನಂತೆ ಕಂಗೊಳಿಸುವ ಈ ರಸ್ತೆ ಹತ್ತಿರಕ್ಕೆ ಹೋದಂತೆ ಅಪಾಯಕ್ಕೆ ಆಹ್ವಾನ ನೀಡುತ್ತದೆ.

ರಸ್ತೆಗೆ ಬಿಲ್ ಆದ ತಕ್ಷಣ ರಸ್ತೆಯೇ ಕಿತ್ತು ಹೋಗಿದೆ. ಮೊಣಕಾಲುದ್ದದಷ್ಟು ಗುಂಡಿಗಳು ಬಿದ್ದಿದೆ. ಹಾಕಿದ ಜಲ್ಲಿಕಲ್ಲು, ಮಣ್ಣು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಹದಗೆಟ್ಟ ಈ ರಸ್ತೆಯಲ್ಲಿ ಪ್ರತಿದಿನ ದ್ವಿಚಕ್ರವಾಹನ ಚಲಾಯಿಸಿ ಕುಸಿದು ಬಿದ್ದು ಹತ್ತಾರು ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಈ ರಸ್ತೆ ಕಾಮಗಾರಿಯಲ್ಲಿ ಅಧಿಕಾರಿಗಳು ಹಗಲು ದರೋಡೆ ಮಾಡಿದ್ದಾರೆ ಎಂಬುದು ಈ ಭಾಗದ ಜನರ ಆಕ್ರೋಶ.

‘ಅಧಿಕಾರಿಗಳು ಇದೇ ರಸ್ತೆಯಲ್ಲಿ ಹತ್ತಾರು ಬಾರಿ ಸಂಚರಿಸುತ್ತಾರೆ. ರಸ್ತೆಯಲ್ಲಿ ಸಂಚರಿಸುವಾಗ ಕಾರು ಅಥವಾ ಜೀಪುಗಳನ್ನು ಬದಿಗೆ ಇಟ್ಟು ದ್ವಿಚಕ್ರವಾಹನ ಅಥವಾ ಆಟೊಗಳಲ್ಲಿ ಓಡಾಡಿದರೆ ಸತ್ಯದ ಅರಿವಾಗಲಿದೆ. ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸುತ್ತಾರೆ ಮದ್ದಲಖಾನ ಗ್ರಾಮದ ನಂಜುಂಡ.

ರಸ್ತೆ ನಿರ್ಮಾಣಕ್ಕೆ ಒತ್ತಾಯ

‘ಗೂಳೂರು ಹೋಬಳಿಯ ತಿಮ್ಮಂಪಲ್ಲಿ, ಜಿ. ಮದ್ದೇಪಲ್ಲಿ, ಬಿಳ್ಳೂರು ಕಡೆಗೆ ಸಂಚರಿಸುವಾಗ ನರಕ ಸದೃಶದ ಅನುಭವವಾಗುತ್ತದೆ. ಮತ್ತೊಂದೆಡೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಗ್ರಾಮಸ್ಥರು ದ್ವಿಚಕ್ರವಾಹನ, ಆಟೊಗಳಲ್ಲಿಯೇ ಪ್ರಯಾಣಿಸಬೇಕು. ಮಹಿಳೆಯರು, ಮಕ್ಕಳು, ವೃದ್ಧರು ವಾಹನಗಳಲ್ಲಿ ಕುಳಿತು ಸಂಚರಿಸಲು ಆಗುವುದಿಲ್ಲ. ಗುಂಡಿ, ಜಲ್ಲಿಕಲ್ಲು ತಪ್ಪಿಸಲು ಸರ್ಕಸ್ ಮಾದರಿಯಲ್ಲಿ ವಾಹನಗಳು ಚಲಿಸುತ್ತವೆ. ಸಂಬಂಧಪಟ್ಟ ಇಲಾಖೆಯು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು’ ಎಂಬುದು ಗ್ರಾಮಸ್ಥರು ಒತ್ತಾಯ.

‘ಮೂರು ವರ್ಷಗಳ ಹಿಂದೆ ಮದ್ದಲಖಾನದಿಂದ ತಿಮ್ಮಂಪಲ್ಲಿಯ ದೇವಾಲಯದವರಿಗೂ ಮರುಡಾಂಬರೀಕರಣ ಮಾಡಲಾಗಿತ್ತು. ರಸ್ತೆಯಲ್ಲಿ 18 ಟನ್ ಭಾರ ಹೊತ್ತ ವಾಹನಗಳು ಸಂಚರಿಸಿದರೆ ಹಾನಿಗೊಳಗಾಗುವುದಿಲ್ಲ. ಆದರೆ, 60ರಿಂದ 80 ಟನ್ ಸಾಮರ್ಥ್ಯದ ಸಿಮೆಂಟ್, ಕ್ವಾರಿ ಕಲ್ಲುಗಳನ್ನು ಹೊತ್ತ ಲಾರಿಗಳು ಸಂಚರಿಸುತ್ತವೆ. ಇದರಿಂದ ಗುಂಡಿಗಳು ಬಿದ್ದಿವೆ. ಗುಂಡಿಗಳಿಗೆ ಮಣ್ಣು ಹಾಕಿಸಿ ಜನರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಗುಣಮಟ್ಟದ ರಸ್ತೆ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಸ್. ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.