ADVERTISEMENT

ಚಿಕ್ಕಬಳ್ಳಾಪುರ: ಸಮಾಜಕ್ಕೆ ಜಾನಪದ ಸಾಹಿತ್ಯ ಅವಶ್ಯ

ಮಂಚನಬಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಶಾಲೆಗೊಂದು ಜಾನಪದ ನೃತ್ಯ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 12:14 IST
Last Updated 25 ಜನವರಿ 2020, 12:14 IST
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.   

ಚಿಕ್ಕಬಳ್ಳಾಪುರ: ‘ಜಾನಪದ ಸಾಹಿತ್ಯ ಸಮಾಜಕ್ಕೆ ಅವಶ್ಯಕವಾದದ್ದು, ಇದರಿಂದ ಜ್ಞಾನ ವೃದ್ಧಿಯಾಗುವುದರ ಜತೆಗೆ ಎಲ್ಲಾ ಜನಾಂಗದವರಲ್ಲಿ ಒಳ್ಳೆಯ ಸಾಮರಸ್ಯ ಮೂಡುತ್ತದೆ. ಜಾನಪದ ಕಲೆಗಳ ಉಳಿವಿನಲ್ಲಿ ಗ್ರಾಮೀಣರ ಪಾತ್ರ ಮಹತ್ವದ್ದು’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಂಚನಬಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶ್ವಂತ್ ಅಕಾಡೆಮಿ ಆಫ್ ಕಲ್ಚರಲ್ ಫಿಲಂ ಸೈನ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆ ಮತ್ತು ಯಶ್ವಂತ್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿದ್ದ ‘ಶಾಲೆಗೊಂದು ಜಾನಪದ ನೃತ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾನಪದಗಳ ಕಲೆಗಳಾದ ಕೋಲಾಟದ ಹಾಡುಗಳು, ಜೋಗುಳದ ಹಾಡುಗಳು ಹಾಗೂ ಪೌರಾಣಿಕ ನಾಟಕಗಳು ಮನರಂಜನೆಯ ಜತೆಗೆ ಜನರಿಗೆ ಸಂದೇಶ ನೀಡುತ್ತವೆ. ಜಾನಪದ ಕಲಾವಿದರು ಕಷ್ಟದಲ್ಲಿದ್ದರೂ ರಂಗಕಲೆಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಜನರ ಸಹಕಾರ ಹಾಗೂ ಸರ್ಕಾರದ ಪ್ರೋತ್ಸಾಹ ಅಗತ್ಯ’ ಎಂದು ತಿಳಿಸಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಜಾನಪದ ಸಾಹಿತ್ಯ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಜಾನಪದ ಸಾಹಿತ್ಯದ ಉಳಿವು ನಮ್ಮೆಲ್ಲರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಜಾನಪದ ಸಾಹಿತ್ಯವನ್ನು ಉಳಿಸಲು ಪ್ರತಿಯೊಬ್ಬರು ಪಣ ತೊಡಬೇಕು. ಜಾನಪದ ಸಾಹಿತ್ಯ ಒಂದು ಸ್ವಾರಸ್ಯಕರ ಮತ್ತು ವೈವಿಧ್ಯಮಯವಾದ ಸಾಹಿತ್ಯದಿಂದ ಕೂಡಿದ್ದು, ಇದನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರು ಪಣತೊಡಬೇಕು ಎಂದರು.

ಸಾಹಿತಿ ಸರಸಮ್ಮ , ಮುಖ್ಯ ಶಿಕ್ಷಕ ಎಂ.ಆರ್.ರಾವ್, ಎಸ್‌ಡಿಎಂಸಿ ಅಧ್ಯಕ್ಷ ವಿ.ಗಂಗಾಧರ್ ಮತ್ತು ಯಶ್ವಂತ್ ಅಕಾಡೆಮಿ ಅಧ್ಯಕ್ಷ ಎಂ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.