ADVERTISEMENT

ಗೌರಿಬಿದನೂರು: ಪಶು ಚಿಕಿತ್ಸಾಲಯ ಉದ್ಘಾಟನೆಗೆ ಸೀಮಿತ

ಮುದುಲೋಡು: ಐದು ತಿಂಗಳು ಕಳೆದರೂ ಸೇವೆಯ ಭಾಗ್ಯ ಇಲ್ಲ

ಎ.ಎಸ್.ಜಗನ್ನಾಥ್
Published 21 ಜನವರಿ 2023, 5:35 IST
Last Updated 21 ಜನವರಿ 2023, 5:35 IST
ಗೌರಿಬಿದನೂರು ತಾಲ್ಲೂಕಿನ ಮುದುಲೋಡು ಗ್ರಾಮದಲ್ಲಿ ಉದ್ಘಾಟನೆಯಾಗಿ ಮುಚ್ಚಿರುವ ಪಶು ಚಿಕಿತ್ಸಾಲಯ
ಗೌರಿಬಿದನೂರು ತಾಲ್ಲೂಕಿನ ಮುದುಲೋಡು ಗ್ರಾಮದಲ್ಲಿ ಉದ್ಘಾಟನೆಯಾಗಿ ಮುಚ್ಚಿರುವ ಪಶು ಚಿಕಿತ್ಸಾಲಯ   

ಗೌರಿಬಿದನೂರು: ತಾಲ್ಲೂಕಿನ ಮುದುಲೋಡಿನಲ್ಲಿ ಪಶುಚಿಕಿತ್ಸಾಲಯ ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆ. ‌ಈ ಭಾಗದಲ್ಲಿನ ಜನ ಮತ್ತು ಜಾನುವಾರುಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ವಿಫಲವಾಗಿದ್ದು, ಹೈನುದಾರರು ಪರದಾಡುವ ಪರಿಸ್ಥಿತಿ ‌ನಿರ್ಮಾಣವಾಗಿದೆ.

ಕಳೆದ 4-5 ತಿಂಗಳ ಹಿಂದೆಯಷ್ಟೆ ಸರ್ಕಾರದಿಂದ ಬಿಡುಗಡೆಯಾದ ನೂತನ ಪಶುಚಿಕಿತ್ಸಾಲಯವನ್ನು ಸ್ಥಳೀಯ ‌ಶಾಸಕರು ಹಾಗೂ ಪಶು ಇಲಾಖೆಯ ಅಧಿಕಾರಿಗಳು ಬಂದು ತಾತ್ಕಾಲಿಕವಾಗಿ ಉದ್ಘಾಟನೆ ಮಾಡಿ ಶೀಘ್ರದಲ್ಲೇ ಆರಂಂಭಿಸುವ ಹಾಗೂ ವೈದ್ಯರ ನೇಮಿಸಿ ಉತ್ತಮ ಸೇವೆ ನೀಡುವ ಭರವಸೆ ನೀಡಿದ್ದರು. ಆದರೆ ಭರವಸೆ ಭರವಸೆ ಹಾಗಿಯೇ
ಉಳಿದಿದೆ.

ಆದರೆ ಸುಮಾರು ಅರ್ಧ ವರ್ಷ ಕಳೆದರೂ‌ ಕೂಡ ಇಲ್ಲಿನ ಜನತೆಗೆ ಪಶು ಚಿಕಿತ್ಸಾಲಯದಿಂದ ಯಾವುದೇ ಪ್ರಯೋಜನ ಲಭ್ಯವಾಗಿಲ್ಲ. ತಾತ್ಕಾಲಿಕವಾಗಿ ಖಾಸಗೀ ಸ್ಥಳದಲ್ಲಿ ಆರಂಭವಾಗಿರುವ ಪಶು ಚಿಕಿತ್ಸಾ ಕೇಂದ್ರವು ಕಾಯಂ ವೈದ್ಯರಿಲ್ಲದೆ ಸದಾ ಬೀಗ ಹಾಕಿರುತ್ತದೆ.

ADVERTISEMENT

ತುರ್ತಾಗಿ ಈ‌ ಭಾಗದ ರೈತರು ತಮ್ಮ ಜಾನುವಾರಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಈ ಬಗ್ಗೆ ಅನೇಕ ಬಾರಿ ಹೈನುದಾರರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಶು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

‘ಸರ್ಕಾರವು ನೀಡುವ ಸೌಲಭ್ಯಗಳು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ರೈತರಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಯಂ ಪಶು ವೈದ್ಯರ ಸೇವೆ ಇಲ್ಲದೆ ಈ ಭಾಗದ ರೈತರು ಮತ್ತು ಹೈನುದಾರರು ಖಾಸಗಿ ವೈದ್ಯರ ಸೇವೆಯನ್ನು ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯ ಅಧಿಕಾರಿಗಳ ನಿರುತ್ಸಾಹದಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ದುರ್ದೈವ’ ಎನ್ನುತ್ತಾರೆ ಸ್ಥಳೀಯ ರೈತ ರಾಮಾಂಜಿನಪ್ಪ.

‘ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ದಂಡು ಗ್ರಾಮಕ್ಕೆ ಆಗಮಿಸಿ ಸರ್ಕಾರದಿಂದ ನೂತನ ಪಶು ಆಸ್ಪತ್ರೆಯ ಭಾಗ್ಯ ನಿಮಗೆ ದೊರೆತಿದೆ ಎಂದು ತಾತ್ಕಾಲಿಕವಾಗಿ ಉದ್ಘಾಟನೆ ಮಾಡಿ ಪ್ರಚಾರ ಪಡೆದು ಹಿಂತಿರುಗಿದವರು ಇಲ್ಲಿಯವರೆಗೂ ಯಾವುದೇ ಸೇವೆ ನೀಡಿಲ್ಲ. ಕನಿಷ್ಟ ಪಶು ವೈದ್ಯರನ್ನು ನೇಮಕ ಮಾಡಿ ಸೇವೆ ನೀಡುವ ಜವಾಬ್ದಾರಿಯೂ ಇಲಾಖೆಗೆ ಇಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಲಕ್ಷ್ಮಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.