ADVERTISEMENT

ಮಳೆ, ಮೋಡದ ಜುಗಲ್ ಬಂದಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:06 IST
Last Updated 20 ಸೆಪ್ಟೆಂಬರ್ 2020, 15:06 IST
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಮಳೆ ಸುರಿಯಿತು
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಮಳೆ ಸುರಿಯಿತು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡ ಜಡಿಮಳೆ, ಮುಸುಕಿದ ಮೋಡದ ಜುಗಲ್ ಬಂದಿ ಮಳೆಗಾಲದ ನಡುವೆ ಚಳಿಗಾಲದ ನೆನಪು ತರಿಸುತ್ತಿದೆ. ಜಿಲ್ಲೆಯಲ್ಲಿ ಭಾನುವಾರ ದಿನವಿಡೀ, ಮುಸುಕು ಹಾಕಿದ ಮೋಡ ಆಗಾಗ ಇಬ್ಬನಿಯಂತಹ ಮಳೆ ಸಿಂಚನ ಮಾಡುತ್ತ, ನಾಗರಿಕರಲ್ಲಿ ನಡುಕ ಹುಟ್ಟಿಸಿತ್ತು.

ಮೋಡ, ಮಳೆಯ ಈ ಜುಗಲ್ಬಂದಿಯ ಪರಿಣಾಮ ತಂಗಾಳಿ ಚಳಿಯನ್ನು ಹೆಚ್ಚಿಸಿದೆ. ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಸಂಜೆಯಾದರೂ ಕರಗಲೇ ಇಲ್ಲ. ಆಗಾಗ ಸುರಿಯುವ ಮಳೆ, ಸುಳಿ ಸುಳಿದು ಬರುವ ತಂಗಾಳಿ ಬೆಚ್ಚನೆಯ ಉಡುಗೆಗಳನ್ನು ಹೊರಗೆ ತೆಗೆಯುವಂತೆ ಮಾಡಿವೆ.

ದಿಢೀರ್‌ನೇ ಉಂಟಾದ ಈ ಹವಾಮಾನ ವೈಪರೀತ್ಯ ಹುಟ್ಟಿಸಿದ ಮೈ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದರು. ಮನೆಯಿಂದ ಹೊರಗಡೆ ಹೋಗುವವರೆಲ್ಲ ಸ್ವೆಟರ್‌, ಟೋಪಿ, ರೇನ್‌ಕೋಟ್‌ ಧರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಕರಗಿ ಬಿಸಿಲು ಹರಿಯಲೇ ಇಲ್ಲ. ಆಗಾಗ ಹನಿಯುತ್ತಿದ್ದ ಮಳೆಯ ಕಾರಣಕ್ಕೆ ವಾರಾಂತ್ಯದ ರಜೆಯನ್ನು ಬಹುತೇಕರು ಮನೆಯಲ್ಲೇ ಕಳೆದರು.

ಕೆಲ ದಿನಗಳ ಹಿಂದಷ್ಟೇ ಸೆಕೆಯ ಬಾಧೆಗೆ ಮನೆಯಲ್ಲಿ ಬೆವರು ಹರಿಸುತ್ತಿದ್ದ ಜನರು ಭಾನುವಾರ ಆಗಾಗ ಜೋರಾಗಿ ಬೀಸುತ್ತಿದ್ದ ತಣ್ಣನೆಯ ಗಾಳಿ ಮೈ ನಡುಕ ಉಂಟು ಮಾಡುತ್ತಿದ್ದ ಕಾರಣಕ್ಕೆ ಜನರು ದಿನವೀಡಿ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಯೇ ಇದ್ದರು. ಆಗಾಗ ಮಳೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮಂಜು ನಗರದ ಸುತ್ತಲಿನ ಬೆಟ್ಟ, ಗುಡ್ಡಗಳಲ್ಲಿ ಪ್ರಕೃತಿಯ ದೃಶ್ಯ ಕಾವ್ಯಗಳನ್ನು ಸೃಷ್ಟಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.