ADVERTISEMENT

ಟೊಮೆಟೊ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 5:40 IST
Last Updated 15 ಡಿಸೆಂಬರ್ 2020, 5:40 IST
ಬ್ರಾಹ್ಮಣರದಿನ್ನೆ ಗ್ರಾಮದಲ್ಲಿ ಟೊಮೆಟೊ ಬೆಳೆ ಕ್ಷೇತ್ರೋತ್ಸವ ನಡೆಯಿತು
ಬ್ರಾಹ್ಮಣರದಿನ್ನೆ ಗ್ರಾಮದಲ್ಲಿ ಟೊಮೆಟೊ ಬೆಳೆ ಕ್ಷೇತ್ರೋತ್ಸವ ನಡೆಯಿತು   

ಚಿಂತಾಮಣಿ: ಟೊಮೆಟೊ ಬೆಳೆಗೆ ರಸಾವರಿ ಮೂಲಕ ಪೋಷಕಾಂಶ ಒದಗಿಸಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಗಾಯಿತ್ರಿ ರೈತರಿಗೆ ಸಲಹೆ ನೀಡಿದರು.

ತಾಲ್ಲೂಕಿನ ಬ್ರಾಹ್ಮಣರದಿನ್ನೆ ಗ್ರಾಮದ ರೈತ ಆನಂದ್ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಟೊಮೆಟೊ ಸಮಗ್ರ ಬೆಳೆ ನಿರ್ವಹಣೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಸಮಾಜದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತದೆ. ತರಕಾರಿ ಸ್ಪೆಷಲ್ ಲಘು ಪೋಷಕಾಂಶ ಮಿಶ್ರಣವನ್ನು ಟೊಮೆಟೊ ಹೂ ಮತ್ತು ಕಾಯಿ ಇರುವಾಗ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು ಎಂದರು.

ADVERTISEMENT

ಸೂಕ್ಷ್ಮಜೀವಿ ಮಿಶ್ರಣ ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಂ ಬಳಕೆಯಿಂದ ಸೊರಗು ರೋಗವನ್ನು ತಡೆಗಟ್ಟಬಹುದು. ಹಳದಿ ಅಂಟುಪಟ್ಟಿ ಮತ್ತು ವೋಟಾ-ಟೀ ಟ್ರಾಪ್ ಅಳವಡಿಕೆ ಮಾಡಿದರೆ ಕೀಟಗಳ ಬಾಧೆಯಿಂದ ಮುಕ್ತವಾಗಬಹುದು ಎಂದು ರೈತರಿಗೆ ಕ್ಷೇತ್ರೋತ್ಸವದ ಮೂಲಕ ಮಾಹಿತಿ ನೀಡಿದರು.

ಗೃಹ ವಿಜ್ಞಾನಿ ಎ. ಭಾವನಾ ಮಾತನಾಡಿ, ಟೊಮೆಟೊಗೆ ಬೆಲೆ ಸಿಗದಿರುವ ಸಂದರ್ಭಗಳಲ್ಲಿ ಮನೆಯ ಬಳಿ ಸ್ವಚ್ಛತೆ ಇರುವ ಸ್ಥಳದಲ್ಲಿ ಹಣ್ಣನ್ನು ಚಕ್ರಾಕಾರದಲ್ಲಿ ಕತ್ತರಿಸಿ 32 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ 2 ದಿನ ಒಣಗಿಸಿ ಪುಡಿ ಮಾಡಬೇಕು ಅಥವಾ ಹಾಗೆಯೇ ಶೇಖರಿಸಿ ಇಡಬೇಕು. ಅಡುಗೆಗೆ ಟೊಮೆಟೊ ಬದಲಿಗೆ ಒಣಗಿಸಿದ ಹಣ್ಣನ್ನು ಬಳಸಬಹುದು ಎಂದು ತಿಳಿಸಿದರು.

ಬೆಲೆ ಇಲ್ಲದ ಸಮಯದಲ್ಲಿ ಹಣ್ಣನ್ನು ರಸ್ತೆಗೆ ಸುರಿಯದೆ ಸಂಸ್ಕರಣೆ ಮಾಡಿ ಸದುಪಯೋಗ ಪಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.