ADVERTISEMENT

ಬಾಗೇಪಲ್ಲಿ: ಟೊಮೆಟೊ ಮಾರುಕಟ್ಟೆ ನನೆಗುದಿಗೆ

ಜಮೀನು ಪಡೆದು ಎರಡೂವರೆ ವರ್ಷವಾದರೂ ನಿರ್ಮಾಣವಿಲ್ಲ

ಡಿ.ಎಂ.ಕುರ್ಕೆ ಪ್ರಶಾಂತ
Published 22 ಏಪ್ರಿಲ್ 2022, 3:02 IST
Last Updated 22 ಏಪ್ರಿಲ್ 2022, 3:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅತಿಹೆಚ್ಚು ಟೊಮೆಟೊ ಬೆಳೆಯುವ ತಾಲ್ಲೂಕುಗಳಲ್ಲಿ ಚಿಂತಾಮಣಿ ಮತ್ತು ಬಾಗೇಪಲ್ಲಿ ಅಗ್ರಸ್ಥಾನದಲ್ಲಿವೆ. ಈ ಎರಡೂ ತಾಲ್ಲೂಕುಗಳ ಟೊಮೆಟೊ ಮಾರುಕಟ್ಟೆಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿವೆ.

ಚಿಂತಾಮಣಿ ಎಪಿಎಂಸಿ 25ಕ್ಕೂ ಹೆಚ್ಚು ಎಕರೆ ವಿಸ್ತೀರ್ಣವಿದೆ. ಆದರೆ, ಬಾಗೇಪಲ್ಲಿ ಮಾರುಕಟ್ಟೆಯ ವಿಸ್ತೀರ್ಣ ಕೇವಲ 4 ಎಕರೆ. ಬಾಗೇಪಲ್ಲಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಟೊಮೆಟೊದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಹರಿಯಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಾಗಾಣಿಕೆ ಆಗುತ್ತಿದೆ.

ಬಾಗೇಪಲ್ಲಿ ಮಾರುಕಟ್ಟೆಯಲ್ಲಿ ಸ್ಥಳದ ಅಭಾವವಿದೆ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿದೆ. ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಸದ್ಯ ಇರುವ 4 ಎಕರೆ ಜಾಗದಲ್ಲಿ ತರಕಾರಿ ವಹಿವಾಟು ನಡೆಯುತ್ತಿದೆ. ಟೊಮೆಟೊ ವಹಿವಾಟಿಗೆ ಸ್ಥಳಾವಕಾಶದ ಕೊರತೆ ಇರುವುದನ್ನು ಮನಗಂಡು ಹೊಸದಾಗಿ ಮಾರುಕಟ್ಟೆ ಪ್ರಾರಂಭ ಮಾಡಲು 9.20 ಎಕರೆಯ ಜಮೀನನ್ನು ಸಹ ಮಂಜೂರು ಮಾಡಲಾಗಿದೆ.

ADVERTISEMENT

ಹೊಸ ಮಾರುಕಟ್ಟೆ ಸ್ಥಾಪನೆಗೆ ಪರಗೋಡು ಬಳಿ 9.20 ಎಕರೆಯನ್ನು 2019ರ ಸೆಪ್ಟೆಂಬರ್ 23ರಂದು ಮಾರುಕಟ್ಟೆ ಸಮಿತಿಯು ಸ್ವಾಧೀನಕ್ಕೆ ಪಡೆದಿದೆ. ಹೀಗೆ ಜಮೀನು ಸ್ವಾಧೀನಕ್ಕೆ ಪಡೆದು ಎರಡೂವರೆ ವರ್ಷವಾದರೂ ಹೊಸ ಟೊಮೆಟೊ ಮಾರುಕಟ್ಟೆ ನಿರ್ಮಾಣದ ವಿಚಾರ ಕನಿಷ್ಠ ಪ್ರಗತಿಯನ್ನೂ ಕಂಡಿಲ್ಲ. ಜಮೀನು ನೀಡಿದ್ದಷ್ಟೇ ಬಂದಿತು ಎನ್ನುವ ಸ್ಥಿತಿ ಇದೆ.

ಮಾರುಕಟ್ಟೆಯನ್ನು ಯಾವಾಗ ಪ್ರಾರಂಭಿಸಲಾಗುವುದು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಹ ಖಚಿತ ಉತ್ತರ ನೀಡುತ್ತಿಲ್ಲ.

‘ಸ್ವಾಧೀನಕ್ಕೆ ಪಡೆದಿರುವ ಜಮೀನಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಪೂರಕವಾಗಿ ಅಗತ್ಯ ಮೂಲಸೌಕರ್ಯ ಒದಗಿಸಲು ಮಾರುಕಟ್ಟೆ ಸಮಿತಿಯಿಂದ ಕ್ರಮವಹಿಸಲಾಗಿದೆ. ಆ ನಂತರ ಮಾರುಕಟ್ಟೆ ಪ್ರಾಂಗಣ ಎಂದು ಘೋಷಿಸಿ ವ್ಯಾಪಾರ ವಹಿವಾಟು ಪ್ರಾರಂಭಿಸಲಾಗುವುದು’ ಎಂದು ಎಪಿಎಂಸಿ ಇಲಾಖೆ ತಿಳಿಸಿದೆ.

ಜಮೀನು ಗುರುತಿಸಿ ಎರಡೂವರೆ ವರ್ಷವಾದರೂ ಹೊಸ ಮಾರುಕಟ್ಟೆ ನಿರ್ಮಾಣ ಆಗದಿರುವುದು ಮತ್ತು ಈಗ ಕಾರ್ಯಾಚರಿಸುತ್ತಿರುವ ಮಾರುಕಟ್ಟೆಯಲ್ಲಿ ಸೌಲಭ್ಯಗಳು ಇಲ್ಲದಿರುವುದು ವ್ಯಾಪಾರಿಗಳು ಮತ್ತು ಟೊಮೆಟೊ ಬೆಳೆಗಾರರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಬ್ಬಂದಿಯೂ ಖಾಲಿ: ಜಿಲ್ಲೆಯಲ್ಲಿಯೇ ದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬಾಗೇಪಲ್ಲಿ ಎಪಿಎಂಸಿಯಲ್ಲಿ ಒಬ್ಬರೇ ಒಬ್ಬ ಅಧಿಕಾರಿಗಳು ಇಲ್ಲ. ಎಲ್ಲವೂ ತಾತ್ಕಾಲಿಕ ನಿಯೋಜನೆಯ ಮೇಲೆ ನಡೆಯುತ್ತಿದೆ. ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮಾರುಕಟ್ಟೆ ಸಹಾಯಕರು, ಎಸ್‌ಡಿಎ, ‘ಡಿ’ ದರ್ಜೆ ನೌಕರರು, ವಾಹನ ಚಾಲಕರು, ಬೆರಳಚ್ಚುಗಾರರು ಸೇರಿದಂತೆ 10 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿವೆ. ಈ ಯಾವ ಹುದ್ದೆಗಳಲ್ಲಿಯೂ ನೌಕರರು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.