ADVERTISEMENT

ಪ್ರವಾಸೋದ್ಯಮ; ಅವಕಾಶಗಳಿವೆ, ಅಭಿವೃದ್ಧಿಯಿಲ್ಲ

ಇಂದು ಪ್ರವಾಸೋದ್ಯಮ ದಿನ; ರಾಜ್ಯದ ಮೊದಲ ರೋಪ್ ವೇ ಜಾರಿ ಸಾಧ್ಯತೆ

ಡಿ.ಎಂ.ಕುರ್ಕೆ ಪ್ರಶಾಂತ
Published 27 ಸೆಪ್ಟೆಂಬರ್ 2021, 6:46 IST
Last Updated 27 ಸೆಪ್ಟೆಂಬರ್ 2021, 6:46 IST
ಗಂಗಾಧರ ರೆಡ್ಡಿ
ಗಂಗಾಧರ ರೆಡ್ಡಿ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಆದರೆ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಇಲ್ಲ! ಚಿಕ್ಕಬಳ್ಳಾಪುರವು ರಾಜಧಾನಿ ಬೆಂಗಳೂರಿಗೆ ಸಮೀಪವಿದೆ. ಐತಿಹಾಸಿಕ ಮತ್ತು ಪ್ರಾಕೃತಿಕವಾಗಿ ಮಹತ್ವವನ್ನು ಹೊಂದಿರುವ ನೆಲೆಗಳಿವೆ. ಆದರೆ ದೊಡ್ಡ ಮಟ್ಟದಲ್ಲಿ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಅಭಿವೃದ್ಧಿಗೊಂಡಿಲ್ಲ.‌‌

ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ ಬೆಟ್ಟಗಳು, ಕೋಟೆಗಳು, ದೇಗುಲಗಳು ಸೇರಿದಂತೆ ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಇವೆ. ಜಿಲ್ಲೆ ಬೆಟ್ಟಗಳು ನಾಡು ಎಂದೇ ಪ್ರಸಿದ್ಧಿ. ನಂದಿಬೆಟ್ಟದ ಕೋಟೆ, ಸ್ಕಂದಗಿರಿ, ಗೋವರ್ಧನ
ಗಿರಿ ಬೆಟ್ಟ, ಆವುಲಬೆಟ್ಟ, ಗುಡಿಬಂಡೆಯ ಸುರಸ್ಮಗಿರಿ ಕೋಟೆ, ಗಡಿದಂ ಬೆಟ್ಟ, ಹರಿಹರ ಬೆಟ್ಟದ ಕೋಟೆ, ಅಂಬಾಜಿದುರ್ಗ, ಕೈವಾರದ ದುರ್ಗಿಬೆಟ್ಟ, ದೇವಿಕುಂಟೆ ಬೆಟ್ಟ ಹೀಗೆ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಬೆಟ್ಟಗಳು, ಕೋಟೆಗಳು ಇವೆ.

ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಗೆ ಚಾರಣಕ್ಕಾಗಿಯೇ ಹೆಚ್ಚು ಜನರು ಬರುವರು. ಪಂಚಗಿರಿಗಳು ಒಂದಕ್ಕೊಂದು ಕೂಡಿಕೊಂಡಿವೆ. ನಂದಿ, ಸ್ಕಂದಗಿರಿ, ಗೋವರ್ಧನಗಿರಿ, ಗೋಪಿನಾಥಬೆಟ್ಟ, ಆವುಲಬೆಟ್ಟ ಒಂದಕ್ಕೊಂದು ತಾಗಿವೆ. ಈ ಗಿರಿಶ್ರೇಣಿ ಚಾರಣಿಗರನ್ನು ಕೈ ಬೀಸಿ ಕರೆಯುವ ಅವಕಾಶವನ್ನು ಹೊಂದಿದೆ. ಸ್ಕಂದಗಿರಿ ಮತ್ತು ನಂದಿಗೆ ಮಾತ್ರ ಪ್ರವಾಸಿಗರು ಚಾರಣ ಹೆಚ್ಚು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಚಾರಣದ ಬಗ್ಗೆ ಮಾಹಿತಿ ನೀಡುವ ಮತ್ತು ಗಿರಿಶ್ರೇಣಿಗಳಲ್ಲಿ ಚಾರಣವನ್ನು ಆಯೋಜಿಸುವ ಸಂಸ್ಥೆಗಳ ಕೊರತೆಯೂ ಎದ್ದು ಕಾಣುತ್ತದೆ.

ADVERTISEMENT

ಬಹಳಷ್ಟು ಪ್ರವಾಸಿ ತಾಣಗಳು ಇಂದಿಗೂ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ನಿರ್ವಹಣೆಯೂ ಇಲ್ಲವಾಗಿದೆ. ಪ್ರಸಿದ್ಧ ಗುಮ್ಮನಾಯಕನಪಾಳ್ಯ ದಂತಹ ಐತಿಹಾಸಿಕ ತಾಣ ಹಾಳು ಸುರಿಯುತ್ತಿದೆ.

ನಂದಿಗೆ ರೋಪ್‌ ವೇ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ನಂದಿಗಿರಿಧಾಮವೇ ಜಿಲ್ಲೆಯ ಪ್ರವಾಸೋದ್ಯಮದ ಮುಟುಕಮಣಿ. ಶನಿವಾರ ಮತ್ತು ಭಾನುವಾರ ಎರಡೇ ದಿನಗಳಲ್ಲಿ 20ರಿಂದ 25 ಸಾವಿರ ಪ್ರವಾಸಿಗರು ನಂದಿ ಬೆಟ್ಟಕ್ಕೆ ಭೇಟಿ ನೀಡುವರು. ಇಂತಹ ಪ್ರಮುಖ ತಾಣಕ್ಕೆ ರೋಪ್ ವೇ ಅಳವಡಿಸಬೇಕು ಎನ್ನುವ ಕೂಗು ದಶಕಗಳಿಂದ ಇತ್ತು.

ಚಿತ್ರನಟ ಶಂಕರ್‌ನಾಗ್‌ 80ರ ದಶಕದಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2015–16ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಿದ್ದರು. ನಂತರ ಇಲಾಖೆಗಳ ನಡುವಿನ ಜಮೀನು ವಿವಾದ ತಿಕ್ಕಾಟಕ್ಕೆ ಕಾರಣವಾಗಿತ್ತು. ಈಗ ರೋಪ್ ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸರ್ವೆಗಳು ಸಹ ನಡೆದಿವೆ. ನಂದಿಬೆಟ್ಟಕ್ಕೆ ರೋಪ್ ವೇ ಅಳವಡಿಕೆಯ ಆಶಾವಾದಗಳು ಮೂಡಿವೆ. ಒಂದು ವೇಳೆ ರೋಪ್ ವೇ ನಿರ್ಮಾಣವಾದರೆ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ರೋಪ್ ವೇ ಎನ್ನುವ ಹೆಗ್ಗಳಿಕೆಗೆ
ಪಾತ್ರವಾಗಲಿದೆ.

ಮತ್ತೊಂದು ಕಡೆ ಈ ಸೂಕ್ಷ್ಮ ಜೀವವೈವಿಧ್ಯ ತಾಣಕ್ಕೆ ಯಾವುದೇ ಧಕ್ಕೆ ಆಗಬಾರದು ಎನ್ನುವ ಕೂಗು ಸಹ ಇದೆ.

ಜೀವನೋಪಾಯಕ್ಕೆ ದಾರಿ: ನಂದಿಬೆಟ್ಟದ ಕಾರಣಕ್ಕೆ ಆ ಸುತ್ತ ಹೋಟೆಲ್ ಸೇರಿದಂತೆ ಕೆಲವು ಉದ್ದಿಮೆಗಳು ತಲೆ ಎತ್ತಿವೆ. ಸ್ಥಳೀಯರ ಆರ್ಥಿಕ ಬದುಕಿಗೂ ಅನುಕೂಲಗಳಾಗಿವೆ. ಇದರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದಲೇ ದೊಡ್ಡ ಮಟ್ಟದಲ್ಲಿ ಜನರು ಆದಾಯವನ್ನು ಕಾಣುವ ಸ್ಥಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.