ADVERTISEMENT

ಶಿಡ್ಲಘಟ್ಟ: ಬದಲಾವಣೆ ಗಾಳಿಗೆ ಸಿಲುಕಿದ ಗರಡಿ ಮನೆ- ಬಂದಿವೆ ಜಿಮ್ ಸಾಧನಗಳು

ಗರಡಿ ಮನೆಯೊಳಗೆ ಬಂದಿವೆ ಜಿಮ್ ಸಾಧನಗಳು

ಡಿ.ಜಿ.ಮಲ್ಲಿಕಾರ್ಜುನ
Published 23 ಫೆಬ್ರುವರಿ 2026, 3:04 IST
Last Updated 23 ಫೆಬ್ರುವರಿ 2026, 3:04 IST
ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯಲ್ಲಿರುವ ಜೈಭಜರಂಗಬಲಿ ಗರಡಿ ಮನೆಯಲ್ಲಿ 70ರ ದಶಕದಲ್ಲಿನ ಗರಡಿಪಟುಗಳು
ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯಲ್ಲಿರುವ ಜೈಭಜರಂಗಬಲಿ ಗರಡಿ ಮನೆಯಲ್ಲಿ 70ರ ದಶಕದಲ್ಲಿನ ಗರಡಿಪಟುಗಳು   

ಶಿಡ್ಲಘಟ್ಟ: ದಶಕಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಪೈಲ್ವಾನರಿಗೆ ಹೆಸರುವಾಸಿಯಾಗಿತ್ತು. ಚಿಂತಾಮಣಿ ರಸ್ತೆಯಲ್ಲಿರುವ ಜೈ ಭಜರಂಗಬಲಿ ಗರಡಿ ಮನೆ, ಕುರುಬರ ಪೇಟೆಯ ಶ್ರೀರಾಮ ಗರಡಿ ಮನೆ, ಅಮೀರ್ ಬಾಬಾ ದರ್ಗಾ ಬಳಿಯ ಹೈದರ್ ಅಲಿ ಗರಡಿ ಮನೆ, ಸಂತೆ ಮೈದಾನದ ಬಳಿಯ ಟಿಪ್ಪು ಸುಲ್ತಾನ್ ಗರಡಿ ಮನೆಗಳಲ್ಲಿ ಜಟ್ಟಿಗಳು ಬೆಳ್ಳಂಬೆಳಿಗ್ಗೆ ಹಾಗೂ ಬಿಸಿಲು ಇಳಿದ ಮೇಲೆ ತೊಡೆ ತಟ್ಟುವ ಸದ್ದು ತಂತಾನೇ ಕಿವಿಮೇಲೆ ಬೀಳುತ್ತಿತ್ತು. ನೂರಾರು ಯುವಕರು ಗರಡಿ ಮನೆಗೆ ಬಂದು ಬೆವರು ಇಳಿಸುತ್ತಿದ್ದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಗರಡಿ ಮನೆಗಳು ಯುವಕರಿಗೆ ದೇಹವನ್ನು ಹುರಿಗಟ್ಟಿಸಲು ಪ್ರೇರೇಪಿಸುತ್ತಿದ್ದವು.

ಆದರೆ ಇಂದು ಜಿಮ್, ಏರೋಬಿಕ್ಸ್ ತಲೆ ಎತ್ತಿ ನಿಂತಿವೆ. ಸಿಕ್ಸ್‌ ಪ್ಯಾಕ್ ಮೋಹಕ್ಕೆ ಒಳಗಾಗಿರುವ ಯುವಕರು ಆಧುನಿಕ ಉಪಕರಣಗಳನ್ನು ಬಳಸಿ ಕಸರತ್ತಿಗೆ ಜೋತುಬಿದ್ದಿದ್ದಾರೆ. ಹೀಗಾಗಿ ಆರೋಗ್ಯದ ಜತೆಗೆ ಯುವಕರಿಗೆ ಶ್ರದ್ಧೆ, ಶಿಸ್ತು, ಭಕ್ತಿಯನ್ನು ಕಲಿಸುತ್ತಿದ್ದ ಶಕ್ತಿಯ ಪ್ರತೀಕವಾಗಿದ್ದ ದೇಸಿ ಪರಂಪರೆಯ ಕುಸ್ತಿ ಕಲೆ ಮತ್ತು ಗರಡಿ ಮನೆಗಳು ನಿಧಾನವಾಗಿ ತಮ್ಮ ರೂಪವನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಿವೆ. ಇದೀಗ ಗರಡಿ ಮನೆಯೊಳಗೆ ಪೈಲ್ವಾನರು ಕುಸ್ತಿ ಅಭ್ಯಾಸ ಮಾಡಲು ಬಳಸುತ್ತಿದ್ದ ವಿಶೇಷವಾದ ಫಲವತ್ತಾದ ಕೆಂಪು ಮಣ್ಣು (ಮಟ್ಟಿ) ಮಾಯವಾಗಿದೆ. ಕಾಲದ ಬದಲಾವಣೆಗೆ ತಕ್ಕಂತೆ ಈಗ ಗರಡಿ ಮನೆಗಳೊಳಗೆ ಜಿಮ್ ಸಾಧನಗಳು ಬಂದಿವೆ.

1659ರವರೆಗೆ ಮೈಸೂರನ್ನು ಆಳಿದ ಅರಸು ಕಂಠೀರವ ಪ್ರಸಿದ್ಧ ಕುಸ್ತಿಪಟು ಎನಿಸಿದ್ದರು. ಅವರ ಪ್ರೋತ್ಸಾಹದಿಂದಾಗಿ ಮೈಸೂರು ಪ್ರಾಂತ್ಯದ ಪ್ರತಿ ಹಳ್ಳಿಗಳಲ್ಲಿನ ಹನುಮಾನ್ ಮಂದಿರಗಳ ಪಕ್ಕ ಗರಡಿ ಮನೆಗಳು ತಲೆ ಎತ್ತಿದ್ದವು. ಜನರು ಅರಳಿಕಟ್ಟೆಗಳಲ್ಲಿ ಕುಳಿತು ಅಖಾಡಕ್ಕೆ ಇಳಿಯುವ ಜಟ್ಟಿಗಳ ಆಕರ್ಷಕ ಮೈಕಟ್ಟು, ಪಟ್ಟು, ಅವರ ಗುರುಗಳು, ಅಭ್ಯಾಸದ ರೀತಿ, ದಿನವೂ ಉಣ್ಣುವ ಆಹಾರ, ನಿತ್ಯದ ಅಭ್ಯಾಸ ಇತ್ಯಾದಿ ಕುರಿತು ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಕುಸ್ತಿಯ ಜನಪ್ರಿಯತೆ ಹಾಗಿತ್ತು.

ADVERTISEMENT

ನಗರದ ಚಿಂತಾಮಣಿ ರಸ್ತೆಯಲ್ಲಿರುವ ಜೈ ಭಜರಂಗಬಲಿ ಗರಡಿ ಮನೆಯು 1972ರ ವಿಜಯದಶಮಿಯಂದು ಪ್ರಾರಂಭವಾಗಿ ಈಗ ನಗರದ ಹಳೆಯ ಗರಡಿ ಮನೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಈ ಗರಡಿ ಮನೆಯಲ್ಲಿ ಸಾಮು ಮಾಡಿದ್ದ ಪೈಲ್ವಾನರು ಹಲವೆಡೆ ನಡೆಯುತ್ತಿದ್ದ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇತಿಹಾಸವಿದೆ. ಕುಸ್ತಿಪ್ರಿಯರು ಈ ಗರಡಿ ಮನೆ, ಇಲ್ಲಿನ ಜಟ್ಟಿಗಳ ವೀರಾವೇಶವನ್ನು ಬಾಯ್ತುಂಬಾ ಕೊಂಡಾಡುತ್ತಿದ್ದರು. ಈಗ ಅದೂ ಕೂಡ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೂ ಹಳೆಯ ಸಂಪ್ರದಾಯಗಳಾದ ಪೂಜೆ, ಗುರುವಿನ ಮಾರ್ಗದರ್ಶನ ಮುಂತಾದವುಗಳನ್ನು ಉಳಿಸಿಕೊಂಡೇ ಹೊಸ ಜಿಮ್ ಸಾಧನಗಳನ್ನು ಹೊಂದಿದೆ.

ನಗರದ ಕುರುಬರಪೇಟೆಯ ಪೈಲ್ವಾನ್ ಮುನಿಶಾಮಪ್ಪನವರು 1983ರಲ್ಲಿ ಕುರುಬರಪೇಟೆಯ ಶ್ರೀರಾಮ ದೇವಾಲಯದ ಬಳಿ ಶ್ರೀರಾಮ ಗರಡಿ ಯುವಕರ ಸಂಘವನ್ನು ಸ್ಥಾಪಿಸಿ ನಗರದ ಹಲವಾರು ಯುವಕರಿಗೆ ಗರಡಿ ಕಲಿಸುವುದಷ್ಟೇ ಅಲ್ಲದೆ ಗರಡಿ ಮನೆಗೆ ಅಗತ್ಯವಾದ ಕಸರತ್ತಿನ ಸಾಮಗ್ರಿಗಳಾದ ಗುಂಡು, ಡಂಬಲ್ಸ್, ಬಲದಂಡುಗಳು, ಕರಾಟಾ ತುಂಡು, ಕೆಮ್ಮಣ್ಣಿನ ಗೋದಾಮುಗಳನ್ನು ಗರಡಿ ಮನೆಯಲ್ಲಿ ಸಜ್ಜುಗೊಳಿಸಿ ನಗರದ ಹಲವಾರು ಯುವಕರನ್ನು ಗರಡಿ ಪಟುಗಳನ್ನಾಗಿ ಸಜ್ಜುಗೊಳಿಸುತ್ತಿದ್ದರು. ಅದಕ್ಕೂ ಹಿಂದಿನವರಾದ ಪೈಲ್ವಾನ್ ಚಂದ್ರಾಯಪ್ಪ, ಪೈಲ್ವಾನ್ ಮುಸ್ತಾಫ, ಮಳಿಗೆ ಮುನಿಯಪ್ಪ, ಸುಬ್ಬಣ್ಣ, ಚೋಟು, ವೆಂಕಟೇಶ್, ರಾಮಪ್ಪ, ಹೈದರಾಲಿ ಗರಡಿ ಮನೆಯ ಹಿರಿಯ ಪೈಲ್ವಾನರಾದ ಉಸ್ತಾದ್ ಅಮ್ಜದ್ ಪಾಷ, ಖಾದರ್ ಪಾಷ, ಎಂ.ಡಿ.ಮೌಲಾ ಮುಂತಾದವರ ಬಗ್ಗೆ ಹಿರಿಯರು ಈಗಲೂ ಮಾತನಾಡುತ್ತಾರೆ.

‘ಆಧುನಿಕತೆಯ ಭರಾಟೆಯಲ್ಲಿ ಇಂದು ಕುಸ್ತಿಪಟುವಾಗುವ ಉತ್ಸಾಹ ಯುವಕರಲ್ಲಿ ಇಲ್ಲವಾಗಿದೆ. ಏನಿದ್ದರೂ ಸಿಕ್ಸ್‌ಪ್ಯಾಕ್, ವಿ-ಶೇಪ್‌ಗಳ ಯುವಕರ ದೇಹಗಳೇ ಆಕರ್ಷಣೆ. ತಾಂತ್ರಿಕ ಆವಿಷ್ಕಾರ, ಸಾಂಸ್ಕೃತಿಕ ಪಲ್ಲಟ ಗರಡಿ ಮನೆಗಳ ಮೇಲೂ ಗಾಢ ಪರಿಣಾಮ ಬೀರಿದೆ. ನಗರದಲ್ಲಿ ವಾಸಿಸುವ ಇಂದಿನ ಅದೆಷ್ಟೋ ಯುವಕರಿಗೆ ಗರಡಿ ಮನೆ ಎಂದರೆ ಗೊತ್ತೇ ಇಲ್ಲ. ಹಾಗೆಂದರೆ ಏನು ಎಂದು ಅವರು ಹುಬ್ಬೇರಿಸುತ್ತಾರೆ’ ಎಂದು ಜೈ ಭಜರಂಗಬಲಿ ಗರಡಿ ಮನೆಯ ಹಿರಿಯ ಗರಡಿಪಟು ವಿ.ವೇಣುಗೋಪಾಲ್ ವಿಷಾದಿಸುತ್ತಾರೆ.

‘ಯುವಕರ ಈ ನಿರ್ಲಕ್ಷ್ಯಕ್ಕೆ ಪ್ರೋತ್ಸಾಹದ ಕೊರತೆಯೂ ಕಾರಣ. ಸಾಧನೆ ಮಾಡುವವರಿಗೆ ಸ್ಫೂರ್ತಿ ನೀಡುವವರಿದ್ದರೆ ಅವರಿಗೂ ಕಲಿಯಲು ಆಸಕ್ತಿ ಹುಟ್ಟುತ್ತದೆ. ಹಿಂದೆಲ್ಲ ಆಗಿಂದಾಗ್ಗೆ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಸ್ಪರ್ಧಿಗಳು ಭರ್ಜರಿಯಾಗಿ ತಯಾರಾಗುತ್ತಿದ್ದರು. ಆದರೆ ಇಂದು ಕುಸ್ತಿ ನಡೆಯುವುದೇ ಅಪರೂಪ. ಹೀಗಾಗಿ ಗಂಡು ಕಲೆ ಎನ್ನಿಸಿಕೊಂಡಿರುವ ಇದನ್ನು ಕೇಳುವವರೇ ಇಲ್ಲವಾಗಿದೆ’ ಎಂಬುದು ಅವರ ಅಳಲು.

‘ಕುಸ್ತಿ ಪಟುಗಳ ಪರಿಕರಗಳು ಸಿಗುವುದೇ ಕಷ್ಟವಾಗಿದೆ. ಜಟ್ಟಿಗಳು ಧರಿಸುವ ಹನುಮಾನ್ ಕಾಚಾ (ಲಂಗೋಟಿ)ಗೆ ವಿಶೇಷ ಪ್ರಾಧಾನ್ಯ. ದೇವರ ಮುಂದೆ ಈ ವಸ್ತ್ರವನ್ನಿಟ್ಟು ಪ್ರಾರ್ಥಿಸಿದ ನಂತರ ಇದನ್ನು ಅವರು ಧರಿಸುತ್ತಿದ್ದೆವು. ಲಂಗೋಟಿಯನ್ನು ವಿನ್ಯಾಸವಾಗಿ ಹೊಲಿಯುವವರೇ ಈಗ ವಿರಳ. ಗರಡಿ ಮನೆಯಲ್ಲಿ ಸಿಗುವ ಆನಂದ ಆಧುನಿಕ ಜಿಮ್‌ಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇಲ್ಲೊಂದು ಬಗೆಯ ಆಯಸ್ಕಾಂತದ ಗುಣವಿದೆ. ನಿರಂತರವಾಗಿ ಇಲ್ಲಿ ಅಭ್ಯಾಸ ನಡೆಸುವಾಗ ನಮಗೆ ದಿನಕ್ಕೊಮ್ಮೆ ಬಾರದೇ ಹೋದರೆ ಕಸಿವಿಸಿ ಎನ್ನಿಸುತ್ತಿತ್ತು. ಘಂ ಎನ್ನುವ ಮಟ್ಟಿಯ (ಅರಿಶಿಣ, ಕುಂಕುಮ, ತುಪ್ಪ ಮಿಶ್ರಿತ ಮಣ್ಣು) ಘಮಲಿನಲ್ಲಿ ಮಿಂದೆದ್ದರೆ ಸಾಕು ಮನಸ್ಸಿಗೆ ಹೊಸ ಹುರುಪು ಬರುತ್ತಿತ್ತು’ ಎನ್ನುವುದು ಇವರ ಅಭಿಮತ.

ಶಿಡ್ಲಘಟ್ಟದ ಚಿಂತಾಮಣಿ ರಸ್ತೆಯಲ್ಲಿರುವ ಜೈಭಜರಂಗಬಲಿ ಗರಡಿ ಮನೆಯಲ್ಲಿ 70ರ ದಶಕದಲ್ಲಿನ ಗರಡಿಪಟುಗಳು
ಕೆಂಪು ಮಣ್ಣಿಗೆ ಹಾಲು ತುಪ್ಪ ಕರ್ಪೂರ ಹಾಗೂ ಸಾಸಿವೆ ಎಣ್ಣೆಯನ್ನು ಬೆರೆಸಿ ಹದಗೊಳಿಸಿ ಮಟ್ಟಿ ಪೂಜೆಯಲ್ಲಿ ನಿರತರಾದ ಗರಡಿಪಟುಗಳು
ಜೈಭಜರಂಗಬಲಿ ಗರಡಿ ಮನೆಯಲ್ಲಿ ಈಗ ಅಳವಡಿಸಿರುವ ಆಧುನಿಕ ಜಿಮ್ ಸಾಧನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.