
ಚಿಂತಾಮಣಿಯ ಚೇಳೂರು ವೃತ್ತದಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿರುವ ವಾಹನಗಳು
ಚಿಂತಾಮಣಿ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಚಿಂತಾಮಣಿ ನಗರ ಶರವೇಗದಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ನಗರ ತ್ವರಿತಗತಿಯಲ್ಲಿ ಅಭಿವೃದ್ಧಿಯೂ ಹೊಂದುತ್ತಿದೆ. ಆದರೆ ನಗರದ ಟ್ರಾಫಿಕ್ ವ್ಯವಸ್ಥೆ ಸುಧಾರಣೆ ಕಂಡಿಲ್ಲ ಎಂಬುದು ನಾಗರಿಕರ ಕೊರಗು. ವಾರಾಂತ್ಯದ ಸಂತೆ ದಿನಗಳಾದ ಶನಿವಾರ, ಭಾನುವಾರಗಳಂದು ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಾರೆ. ವಾಹನ ದಟ್ಟಣೆ ನಿಯಂತ್ರಿಸಲು ಸಂಬಂಧಪಟ್ಟವರು ಪ್ರಯತ್ನಿಸುತ್ತಿಲ್ಲ ಎಂದು ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.
ನಗರದಲ್ಲಿ ಹಲವಾರು ಶಾಲಾ ಕಾಲೇಜುಗಳಿವೆ. ಜಿಲ್ಲೆಯಲ್ಲಿ ಹೆಚ್ಚು ವಹಿವಾಟು ನಡೆಸುವ ಕೃಷಿ ಉತ್ಪನ್ನ ಮಾರುಕಟ್ಟೆ ಇದೆ. ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾವಿರಾರು ಜನರು ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುತ್ತಾರೆ. ಜತೆಗೆ ನೂರಾರು ಲಾರಿಗಳು, ಟ್ರ್ಯಾಕ್ಟರ್, ಖಾಸಗಿ ಬಸ್ ಸಂಚರಿಸುತ್ತವೆ. ಜನ ನಡೆದಾಡಲು ಪಾದಚಾರಿ ಮಾರ್ಗಗಳೇ ಇಲ್ಲ. ಪಾದಾಚಾರಿ ರಸ್ತೆಗಳು ದ್ವಿಚಕ್ರವಾಹನ ಪಾರ್ಕಿಂಗ್ ಜಾಗಗಳಾಗಿವೆ. ಹೀಗಾಗಿ ಜನ ಅನಿವಾರ್ಯವಾಗಿ ರಸ್ತೆಯಲ್ಲೆ ಹೋಗಬೇಕಾಗಿದೆ. ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ.
ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ನಗರಸಭೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾರ್ಕಿಂಗ್ ವ್ಯವಸ್ಥೆ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಪೊಲೀಸರು 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಕ್ರಮಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.
ನಗರದ ಬೆಂಗಳೂರು ವೃತ್ತ, ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತದಲ್ಲಿ ಸಿಗ್ನಲ್ ದೀಪಗಳನ್ನು, ಸಿ.ಸಿ ಕ್ಯಮೆರಾ ಅಳವಡಿಸಿದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆರಂಭದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಿದ ಸಿಗ್ನಲ್ ನಂತರ ಆಗಾಗ ಕೆಡುತ್ತಿವೆ. ದುರಸ್ತಿ ಆಗಾಗ ನಡೆಯುತ್ತಿದ್ದರೂ ಸಂಪೂರ್ಣ ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ. ಸಿಗ್ನಲ್‌ಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಜನರು ಸಹ ರಸ್ತೆ ನಿಯಮಗಳನ್ನು ಪಾಲಿಸದಿರುವುದು ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ರಸ್ತೆ ನಿಯಮಗಳ ಬಗ್ಗೆ ಯಾವುದೇ ಕ್ರಮಕೈಗೊಂಡರೂ ಜನರು ಚುನಾಯಿತ ಪ್ರತಿನಿಧಿಗಳಿಗೆ ಮೊರೆ ಹೋಗಿ ತಡೆ ಮಾಡುತ್ತಾರೆ. ರಸ್ತೆ ನಾಮಫಲಕಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಹೊರಗಡೆಯಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರಿಗಂತೂ ಚಿಂತಾಮಣಿಯಲ್ಲಿ ದಾಟುವಷ್ಟರಲ್ಲೇ ಮರುಜನ್ಮ ಪಡೆದಂತಾಗುತ್ತದೆ.
ನಗರದ ಯಾವ ಭಾಗದಲ್ಲೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಗ್ರಂಥಾಲಯದ ಪಕ್ಕದಲ್ಲಿ ಪಾರ್ಕಿಂಗ್ ಮಾಡಲು ರೂಪಿಸಿದ್ದ ಯೋಜನೆ ಕೇವಲ ಭೂಮಿಪೂಜೆ ನಡೆಸಿ ಪ್ರಚಾರ ಪಡೆಯುವಲ್ಲಿ ಮುಕ್ತಾಯವಾಗಿದೆ. ಖಾಸಗಿ ಬಸ್ ನಿಲುಗಡೆಗೆ ನಿಲ್ದಾಣವಿಲ್ಲ. ಬಸ್ ಎಲ್ಲಿ ನಿಲ್ಲುತ್ತದೋ ಅದೇ ನಿಲ್ದಾಣ ಎಂಬ ಸ್ಥಿತಿ ಇದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ.
ನಗರದ ತಾಲ್ಲೂಕು ಕಚೇರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮುಂದೆ ಫುಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ಜೋಡಿ ರಸ್ತೆ, ಎಂ.ಜಿ ರಸ್ತೆಯಲ್ಲೂ ಸಹ ದ್ವಿಚಕ್ರವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು ಮಾಮೂಲಿಯಾಗಿದೆ. ಪೊಲೀಸರು ಕಂಡೂಕಾಣದಂತೆ ಜಾಣಕುರುಡುತನ ತೋರುತ್ತಾರೆ.
ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಸಂಚಾರ ಪೊಲೀಸ್ ಠಾಣೆಯ ಸ್ಥಾಪಿಸುವ ಬೇಡಿಕೆ ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಂಚಾರ ಠಾಣೆ ಸ್ಥಾಪಿಸಬೇಕು ಎಂದು 10 ವರ್ಷಗಳ ಹಿಂದೆ ಚಿಂತನೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಸಾಮಾನ್ಯವಾಗಿದೆ. ಅನುಷ್ಠಾನಗೊಳ್ಳುವುದು ಮಾತ್ರ ಮರೀಚಿಕೆಯಾಗಿದೆ.
ನಗರದಲ್ಲಿ 31 ವಾರ್ಡ್‌ಗಳಿವೆ. 2011ರ ಜನಗಣತಿ ಪ್ರಕಾರ 76 ಸಾವಿರ ಜನಸಂಖ್ಯೆ ಇದೆ. ವ್ಯಾಪಾರಿ ಕೇಂದ್ರವಾಗಿದ್ದು, ಈಗಿನ ಜನಸಂಖ್ಯೆ ಸುಮಾರು 1.5 ಲಕ್ಷಕ್ಕೂ ಮೀರಿದೆ. 234 ರಾಷ್ಟ್ರೀಯ ಹೆದ್ದಾರಿ ನಗರದ ಮೂಲಕ ಹಾದು ಹೋಗುತ್ತದೆ. ಸಂಚಾರ ನಿಯಂತ್ರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ನಗರ ಪೊಲೀಸ್ ಠಾಣೆಯಿಂದ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಜತೆಗೆ ಸಿಬ್ಬಂದಿ ಕೊರತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಕರವಾಗಿರುವಾಗ ಸಂಚಾರ ವ್ಯವಸ್ಥೆಯನ್ನು ಹೇಗೆ ಸರಿಪಡಿಸಲು ಸಾಧ್ಯ? ನಗರದಲ್ಲಿ ಸಂಚಾರ ವ್ಯವಸ್ಥೆ ಅಧ್ವಾನವಾಗಿದೆ. ರಸ್ತೆಗಳಲ್ಲಿ ಜನರು ಸಂಚರಿಸುವುದು ಸವಾಲಾಗಿದೆ ಎಂದು ನಾಗರಿಕರು ಗೊಣಗುತ್ತಾರೆ.
ನಾಗರಿಕರ ಸಹಕಾರ ಅಗತ್ಯ
ಟ್ರಾಫಿಕ್ ವ್ಯವಸ್ಥೆ ಸುಧಾರಿಸುವಲ್ಲಿ ಪೊಲೀಸರ ಕರ್ತವ್ಯ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಸಿಬ್ಬಂದಿ ಕೊರತೆ ನಡುವೆಯೂ ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ. ನಾಗರಿಕರು ಸಹಕರಿಸಿದರೆ ವ್ಯವಸ್ಥೆ ಸುಧಾರಿಸುತ್ತದೆ.
-ಪಿ.ಮುರಳೀಧರ್, ಡಿವೈಎಸ್ಪಿ
ಪ್ರತಿನಿತ್ಯ ಜಾಗೃತಿ ಮೂಡಿಸಿ
ಪೊಲೀಸರು ತಿಂಗಳಿಗೆ, 6 ತಿಂಗಳಿಗೆ ಒಂದು ದಿನ ರಸ್ತೆಗೆ ಇಳಿದು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸರು ಪ್ರತಿನಿತ್ಯ ಜಾಗೃತಿ ಮೂಡಿಸಿದರೆ ವಾಹನ ಸವಾರರು ಎಚ್ಚೆತ್ತು ನಿಯಮ ಪಾಲಿಸುತ್ತಾರೆ.
-ಎಂ.ಆರ್.ಲೋಕೇಶ್, ಕರವೇ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.