ಚಿಕ್ಕಬಳ್ಳಾಪುರ: ‘ಒಂದು ಕೊಠಡಿಯಲ್ಲಿ ಮಲ್ಲಿಗೆ ಹೂವುಗಳನ್ನು ಇರಿಸಿ ಆ ನಂತರ ಹೂವುಗಳನ್ನು ಅಲ್ಲಿಂದ ಕೊಂಡೊಯ್ದರೂ ಕೆಲವು ಕಾಲ ಪರಿಮಳ ಇರುತ್ತದೆ. ಮಲ್ಲಿಗೆ ಹೂ ತನ್ನ ಅನುಪಸ್ಥಿತಿಯಲ್ಲಿಯೂ ಕಂಪು ಬೀರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಬದುಕು ಪರಿವರ್ತನೆ ಮಾಡಿಕೊಳ್ಳುವ ಶಿಕ್ಷಣ ಅಗತ್ಯ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ಎಸ್‌ಜೆಸಿಐಟಿ ಆವರಣದಲ್ಲಿ ಶುಕ್ರವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ ‘ಶಿಕ್ಷಣ ಮಾನವೀಕರಣದತ್ತ ಒಂದು ಹೆಜ್ಜೆ’ ರಾಷ್ಟ್ರೀಯ ವಿಚಾರ ಸಂಕಿರಣದ ಸಾನ್ನಿಧ್ಯವಹಿಸಿ ಮಾತನಾಡಿದರು.
ತರಗತಿಗಳಲ್ಲಿ ಕಲಿತಿದ್ದನ್ನು ಒಂದು ಹಂತದಲ್ಲಿ ಮರೆತ ನಂತರ ನಿಮ್ಮಲ್ಲಿ ಉಳಿಯುವುದೇ ಸಾರ ವಿದ್ಯೆ. ಆ ಸಾರ ವಿದ್ಯೆಯು ಬದುಕನ್ನು ಬೆಳಗುವಂತೆ ಇರಬೇಕು. ಒಂದು ಸೆಮಿಸ್ಟರ್‌ನ ಕೊನೆಯಲ್ಲಿ ನಡೆಸುವ ಪರೀಕ್ಷೆ, ಅಂಕಗಳಿಕೆಯ ಹೊರತಾದ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಇದೆ ಎಂದು ಹೇಳಿದರು.
ಯಾರೇ ಒಬ್ಬರು ತಪ್ಪು ಮಾಡುವುದೇ ದೊಡ್ಡದಲ್ಲ. ಆದರೆ ಮಾಡಿದ ತಪ್ಪನ್ನು ಪದೇ ಪದೇ ಮಾಡುವುದು ಅಧಃಪತನ. ಒಬ್ಬ ಒಂದು ಸೂತ್ರ ಕಂಡು ಹಿಡಿದರೆ ಮತ್ತೊಬ್ಬ ಆ ಸೂತ್ರವನ್ನು ಕೊಂಡೊಯ್ಯುವನು. ಆ ಸೂತ್ರದಿಂದ ಕೆಲವರು ಜಗತ್ತನ್ನು ಬೆಳಗಿದರೆ ಮತ್ತೆ ಕೆಲವರು ಅಣುಬಾಂಬುಗಳನ್ನು ತಯಾರಿಸುವರು ಎಂದರು.
‘ನಾನು ಪ್ರಾಣಿ ಅಲ್ಲ ಎನ್ನುವ ವಿವೇಕ ನಮಗೆ ಇರಬೇಕು. ನಿಮ್ಮ ಉತ್ತರ ಪತ್ರಿಕೆಗಳನ್ನು ಯಾರೇ ಮೌಲ್ಯಮಾಪನ ಮಾಡಲಿ ಆದರೆ ನಿಮ್ಮನ್ನು ನೀವು ಮೌಲ್ಯ ಮಾಪನ ಮಾಡಿಕೊಳ್ಳುವುದು ಮಹತ್ವವಾದುದು. ಎರಡು ಅಂಕ ಕಡಿಮೆ ಆದರೆ ನೇಣು ಹಾಕಿಕೊಳ್ಳುವುದಲ್ಲ’ ಎಂದರು.
‘ನಿಮ್ಮ ಶಿಕ್ಷಣ ಪೂರ್ಣವಾದ ನಂತರ ನೀವು ಶೀಲಸಂಪನ್ನರೇ, ಮನಸ್ಸು, ಬುದ್ದಿ ಎತ್ತರದಲ್ಲಿ ಇದೆಯೇ, ಅಧ್ಯಾತ್ಮಕವಾಗಿ ವಿಕಾಸವಾಗಿದೆಯೇ...ಹೀಗೆ ನಾನಾ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಅವುಗಳಿಗೆ ಅಂಕ ಕೊಟ್ಟುಕೊಳ್ಳಬೇಕು. ಆಗ 100 ಅಂಕಗಳು ನಿಮಗೆ ಬಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ತೋರುತ್ತದೆ’ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಬಗ್ಗೆ ಹೇಳುತ್ತೇವೆ. ಆದರೆ ಉನ್ನತ ಶಿಕ್ಷಣದಲ್ಲಿ ಇದಕ್ಕೆ ವಿರುದ್ಧವಾದ ನಡೆಗಳು ಇವೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.
ಕಾಲೇಜುಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡುವುದರ ಜೊತೆಗೆ ಹೃದಯವಂತರು, ಮಾನವೀಯ ಗುಣವುಳ್ಳವರನ್ನಾಗಿ ಮಾಡಬೇಕು. ಕಾಲೇಜುಗಳು ಒಳ್ಳೆಯ ಮನುಷ್ಯರನ್ನು ಸೃಷ್ಟಿಸಬೇಕು ಎಂದರು.
ದೇಶದ ಭವಿಷ್ಯ ನಿಂತಿರುವುದು ಶಿಕ್ಷಕರ ಮೇಲೆ. ಆ ಶಿಕ್ಷಕರನ್ನು ಮಾನವೀಯ ಗೊಳಿಸಿದರೆ ಅವರು ಸಾವಿರಾರು ವಿದ್ಯಾರ್ಥಿಗಳನ್ನು ಮಾನವೀಯಗೊಳಿಸುವರು ಎಂದು ಹೇಳಿದರು.
‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು’ ಎನ್ನುವ ಅನುಭೂತಿಯನ್ನು ಶಿಕ್ಷಣದಲ್ಲಿ ರೂಢಿಸಿಕೊಳ್ಳಬೇಕು. ಶಿಕ್ಷಣ ಮಾನವೀಯಕರಣವಾಗದಿದ್ದರೆ ವಿಶ್ವಕ್ಕೆ ಮುಂದಿನ ದಿನಗಳಲ್ಲಿ ಅಪಾಯ ಖಚಿತ. ಶಿಕ್ಷಣದಲ್ಲಿ ಮಾನವೀಯ ವಿಚಾರಗಳನ್ನು ಸೇರಿಸದಿದ್ದರೆ ಜಗತ್ತು ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು.
‘ಮಾನವೀಯ ಮೌಲ್ಯಗಳು ಮತ್ತು ಅವುಗಳ ಪ್ರಸ್ತುತತೆ’ ಕುರಿತು ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ, ‘ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆ ಹೇಗೆ’ ಕುರಿತು ಪ್ರೊ.ಮೀನಾಕ್ಷಿ ಬಿಸ್ವಾಲ್, ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆಯ ಸವಾಲುಗಳು ಕುರಿತು ಪ್ರೊ.ಅಶೋಕ ಎಸ್.ಆಲೂರ ಮಾಹಿತಿ ಹಂಚಿಕೊಂಡರು.
ಅರ್ಬಾಜ್ ಪಾಷ, ಸಹನಾ, ಗೋಪಾಲಗೌಡ, ನಿರೂಪ್, ಕುಲಸಚಿವರಾದ ಸಿ.ಎನ್.ಶ್ರೀಧರ್, ಎನ್.ಲೋಕನಾಥ್, ವಿದ್ಯಾಧಿಕಾರಿ ವಸಂತಕುಮಾರ್, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಹುಬಲಿ ಜಿ.ಪಿ., ನಿವತ್ತ ಪ್ರಾಂಶುಪಾಲ ಪ್ರೊ.ಕೋಡಿ ರಂಗಪ್ಪ, ನರೇಂದ್ರ ಬಾಬು ಮತ್ತಿತರರು ಪಾಲ್ಗೊಂಡಿದ್ದರು.
ಮೆಟಾಫಿಸಿಕಲ್ ಕೋರ್ಸ್ ಆರಂಭಕ್ಕೆ ಸಲಹೆ ಆದಿಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಯಲ್ಲಿ ಮೆಟಾಫಿಸಿಕಲ್ ಕೋರ್ಸ್ ಆರಂಭಿಸಲಾಗಿದೆ. ಇದರಿಂದ ನಾನೇನು ಎನ್ನುವುದು ವಿದ್ಯಾರ್ಥಿ ತಿಳಿಯಲು ಸಾಧ್ಯವಾಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಈ ಕೋರ್ಸ್ ಆರಂಭಕ್ಕೆ ಕ್ರಮವಹಿಸಲಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಮಾನವೀಯ ಮೌಲ್ಯ; ವಿದ್ಯಾರ್ಥಿಗೆ ಪದಕ ಮುದ್ದೇನಹಳ್ಳಿಯ ಸತ್ಯಸಾಯಿ ವಿಶ್ವವಿದ್ಯಾಲಯವು ಮಾನವೀಯ ಶಿಕ್ಷಣದ ವಿಚಾರವಾಗಿ 7 ವಿವಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಅದರಲ್ಲಿ ನಮ್ಮ ವಿಶ್ವವಿದ್ಯಾಲಯವೂ ಇದೆ ಎಂದು ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು. ಉತ್ತರ ವಿವಿಯಡಿ 280 ಕಾಲೇಜುಗಳಿದ್ದು ಆಗಾಗ್ಗೆ ಈ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಪ್ರತಿ ವಿವಿಗೆ ಇಬ್ಬರು ಶಿಕ್ಷಕರನ್ನು ಸತ್ಯಸಾಯಿ ವಿವಿ ನೇಮಿಸಿದೆ. ಹೆಚ್ಚು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗೆ ಬಂಗಾರದ ಪದಕ ನೀಡುವರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.