ADVERTISEMENT

ಚಿಕ್ಕಬಳ್ಳಾಪುರ: ಖರೀದಿದಾರರಿಲ್ಲದೆ ಕುಸಿದ ರೇಷ್ಮೆಗೂಡಿನ ಬೆಲೆ

ಈರಪ್ಪ ಹಳಕಟ್ಟಿ
Published 29 ಮೇ 2020, 3:29 IST
Last Updated 29 ಮೇ 2020, 3:29 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಚೀನಾದಲ್ಲಿ ಕೋವಿಡ್‌ 19 ಉಲ್ಭಣಿಸಿದಾಗ ದೇಶಕ್ಕೆ ಕಚ್ಛಾ ರೇಷ್ಮೆ ಆಮದು ಕುಸಿದ ಪರಿಣಾಮ ಮುದಗೊಂಡಿದ್ದ ಸ್ಥಳೀಯ ಬೆಳೆಗಾರರು, ರೀಲರ್‌ಗಳಿಗೆ ಇದೀಗ ಅದೇ ಕೋವಿಡ್‌ ಸಂಕಟ ತಂದೊಡ್ಡಿದೆ.

ಒಂದೆಡೆ ಖರೀದಿದಾರರಿಲ್ಲದೆ ಪಾತಾಳಕ್ಕೆ ಕುಸಿದ ರೇಷ್ಮೆಗೂಡಿನ ಬೆಲೆ, ಇನ್ನೊಂದೆಡೆ ಉತ್ಪಾದನೆಯಾದರೂ ಮಾರುಕಟ್ಟೆಗೆ ರವಾನೆಯಾಗದ ರೇಷ್ಮೆಯಿಂದಾಗಿ ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳ ಬದುಕು ಇದೀಗ ಗೂಡಿನ ಒಳಗೆ ಸಿಲುಕಿದ ಹುಳುವಿನಂತಾಗಿದೆ.

ಚೀನಾದಿಂದ ಭಾರತಕ್ಕೆ ವಾರ್ಷಿಕ 5,000 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಆಮದು ಆಗುತ್ತದೆ. ಇದರಲ್ಲಿ ಗರಿಷ್ಠ ಪ್ರಮಾಣ 3,000 ಮೆಟ್ರಿಕ್ ಟನ್‌ ಗೂಡು ಕರ್ನಾಟಕಕ್ಕೆ ಬರುತ್ತದೆ. ಕೋವಿಡ್‌ ಉಲ್ಭಣಿಸಿದ ಕಾರಣ ಕೆಲ ತಿಂಗಳಿಂದ ಚೀನಾ ವಸ್ತುಗಳ ಆಮದು ಸಂಪೂರ್ಣವಾಗಿ ನಿಂತಿದೆ.

ADVERTISEMENT

ಇದರಿಂದ ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ರೇಷ್ಮೆಗೂಡಿನ ಬೆಲೆ ಗಗನಮುಖಿಯಾಗಿ ಬೆಳೆಗಾರರು ಮೊಗದಲ್ಲಿ ಸಂತಸ ಮೂಡಿಸಿತ್ತು. ಮಾರ್ಚ್‌ ಕಳೆಯುವ ಹೊತ್ತಿಗೆ ದೇಶದ ರೇಷ್ಮೆ ಕ್ಷೇತ್ರದ ಮೇಲೂ ಕೋವಿಡ್‌ ಕರಿಛಾಯೆ ಆವರಿಸಿಕೊಂಡು, ಅದೂ ಜಿಲ್ಲೆಯಲ್ಲೂ ದೊಡ್ಡ ನಷ್ಟ ಉಂಟು ಮಾಡಿದೆ.

ಕಳೆದ ಫೆಬ್ರುವರಿ, ಮಾರ್ಚ್‌ನಲ್ಲಿ ಚಿಂತಾಮಣಿ ಮತ್ತು ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಒಂದು ಕೆ.ಜಿ ರೇಷ್ಮೆಗೂಡು ₹600ರ ಗಡಿ ಸಮೀಪ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿ ಮಾರುಕಟ್ಟೆಗಳಿಗೆ ಗೂಡುಗಳ ಆವಕ ಹೆಚ್ಚಿಸಿತ್ತು.

ಈ ನಡುವೆ ದೇಶದಲ್ಲೂ ವ್ಯಾಪಕವಾಗಿ ಹರಡಿದ ಕೋವಿಡ್‌ ಕಾರಣಕ್ಕೆ ಪ್ರಸ್ತುತ ರೇಷ್ಮೆಗೂಡಿನ ದರ ಒಂದು ಕೆ.ಜಿ.ಗೆ ₹200ಕ್ಕೆ ಕುಸಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ಸುಮಾರು 16 ಸಾವಿರ ರೈತರು ಕಂಗಾಲಾಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕಚ್ಛಾ ರೇಷ್ಮೆ, ಹುರಿ ರೇಷ್ಮೆ ಬಹುಪಾಲು ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಮಾರುಕಟ್ಟೆಗಳಿಗೆ ರವಾನೆಯಾಗುತ್ತದೆ. ಆದರೆ, ಇತ್ತೀಚೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಕಾರಣಕ್ಕೆ ರೇಷ್ಮೆಗೂಡು ಸಾಗಾಣಿಕೆ ಕೂಡ ಕಷ್ಟದ ಕೆಲಸವಾಗಿದೆ.

ಇದರ ಪರಿಣಾಮ, ಇನ್ನೊಂದೆಡೆ ಜಿಲ್ಲೆಯಲ್ಲಿರುವ ಸುಮಾರು 3,000ಕ್ಕೂ ಅಧಿಕ ರೀಲರ್‌ಗಳಿಗೆ ಸಂಕಷ್ಟ ತಂದೊಡ್ಡಿದೆ. ಕಳೆದ ಕೆಲ ತಿಂಗಳಲ್ಲಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮ ಶೇ 80 ರಷ್ಟು ರೀಲರ್‌ಗಳು ಬಂಡವಾಳ ಕಳೆದುಕೊಂಡು ಬರಿಗೈಯಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೆ.

ಜಿಲ್ಲೆಯಲ್ಲಿ ರೇಷ್ಮೆ ಉದ್ಯಮವನ್ನೇ ನಂಬಿದ 30 ಸಾವಿರ ಕಾರ್ಮಿಕರಿದ್ದಾರೆ. ಅಸಂಘಟಿತ ವಲಯಕ್ಕೆ ಸೇರಿದ ಈ ಕಾರ್ಮಿಕರಿಗೆ ರಾಜ್ಯ, ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ನೆರವು ಸಿಕ್ಕಿಲ್ಲ ಎನ್ನುತ್ತಾರೆ ರೀಲರ್‌ಗಳು. ಇದು ಕೂಡ ರೇಷ್ಮೆ ಉದ್ಯಮವನ್ನು ನಲುಗುವಂತೆ ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹಿಪ್ಪುನೆರಳೆ ಸೊಪ್ಪು ಬೆಳೆಯುತ್ತಿದ್ದಾರೆ. ಸದ್ಯ ಹುಳ ಸಾಕಣೆ ಮಾಡಲು ಬೆಳೆಗಾರರು ಹಿಂದೇಟು ಹಾಕುತ್ತಿರುವ ಕಾರಣಕ್ಕೆ ಸೊಪ್ಪು ಬೆಳೆದವರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಸರ್ಕಾರ ಎಲ್ಲ ಬೆಳೆಗಾರರ ರೀತಿಯಲ್ಲೇ ರೇಷ್ಮೆ ಬೆಳೆಗಾರರ ಹಿತ ಕಾಯಲು ಪರಿಹಾರ ಘೋಷಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.