ADVERTISEMENT

ಮದ್ಯ ಸಂಗ್ರಹಕ್ಕೆ ಹರಸಾಹಸ

ಅಬಕಾರಿ ಇಲಾಖೆಯಿಂದ ಮಾರಾಟದ ಮೇಲೆ ತೀವ್ರ ನಿಗಾ

ಎ.ಎಸ್.ಜಗನ್ನಾಥ್
Published 16 ಡಿಸೆಂಬರ್ 2020, 1:49 IST
Last Updated 16 ಡಿಸೆಂಬರ್ 2020, 1:49 IST

ಗೌರಿಬಿದನೂರು: ಗ್ರಾಮ ಪಂಚಾಯಿತಿ ಚುನಾವಣಾ ಅಖಾಡಕ್ಕೆ ನಾಮಪತ್ರ ಸಲ್ಲಿಸಿರುವ ಹಾಗೂ ಸಲ್ಲಿಸಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊನೆಯ ದಿನದವರೆಗೂ ಮತದಾರರನ್ನು ಸೆಳೆಯಲು ಮದ್ಯ ಸಂಗ್ರಹಿಸಲು ಹರಸಾಹಸ ನಡೆಸುತ್ತಿದ್ದಾರೆ.

ಚುನಾವಣೆಯಲ್ಲಿ ಕುರುಡು ಕಾಂಚಾಣದ ಜತೆಗೆ ಮದ್ಯದ ಘಮಲು ಜೋರಾಗಿರುತ್ತದೆ. ಹೀಗಾಗಿ ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಅಬಕಾರಿ ಇಲಾಖೆಯು ಸರ್ಕಾರದ ಆದೇಶದನ್ವಯ ಮದ್ಯ ಮಾರಾಟಕ್ಕೆ ಕಡಿವಾಣ ಹೇರಿದೆ. ಅಧಿಕಾರಿಗಳು ತೀವ್ರ ನಿಗಾವಹಿಸಿರುವುದರಿಂದ ಮದ್ಯ ಸಂಗ್ರಹಕ್ಕೆ ಮುಖಂಡರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.

‘ಈ ಎಲ್ಲ ಆಳ ಅಗಲಗಳನ್ನು ಬಲ್ಲಂತಹ ನಾಯಕರು ಸ್ಥಳೀಯ ಚುನಾವಣೆಗೆ ಅತ್ಯವಶ್ಯಕವಾಗಿರುವ ಮದ್ಯವನ್ನು ನೆರೆಯ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಅಕ್ರಮವಾಗಿ ಹೆಚ್ಚಿನ ಹಣ ನೀಡಿ ಸರಬರಾಜು ‌ಮಾಡಿಸಿಕೊಂಡು ರಹಸ್ಯ ಸ್ಥಳಗಳಲ್ಲಿ
ಸಂಗ್ರಹಿಸುತ್ತಿರುವ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.
ಮತ್ತೊಂದೆಡೆ ಕೆಲವು ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಕಳೆದ ಒಂದು ವಾರದ ಹಿಂದೆಯೇ ಪಂಚಾಯಿತಿವಾರು ಸರಬರಾಜು‌ ಮಾಡಲಾಗಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು.

ADVERTISEMENT

ಈ ವಿಚಾರವಾಗಿ ತಾಲ್ಲೂಕು ‌ಅಬಕಾರಿ ಇಲಾಖೆಯ ನಿರೀಕ್ಷಕರಾದ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ‘ಇಲಾಖೆಯ ಆದೇಶದಂತೆ ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿಗಳಿಗೆ ತಕ್ಕಂತೆ ಮದ್ಯ ಮಾರಾಟದ ಬಗ್ಗೆ ಬಾರ್ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ. ಇದನ್ನು‌ ಮೀರಿ ಅಕ್ರಮವಾಗಿ ಅಥವಾ ಹೆಚ್ಚಿನ ಸರಬರಾಜು ಮಾಡುವುದು ಕಂಡುಬಂದಲ್ಲಿ ಕೂಡಲೇ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮದ್ಯದ ಅಕ್ರಮ ಸರಬರಾಜು ಹಾಗೂ ಸಂಗ್ರಹಣೆಯ ಬಗ್ಗೆ ನಾಗರಿಕರು ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸಲಾಗುವುದು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ನಡೆಯುವ ಪ್ರತಿಯೊಂದು ಅಕ್ರಮ ಮತ್ತು ಸಕ್ರಮ ವ್ಯಾಪಾರದ ಬಗ್ಗೆ ಅಧಿಕಾರಿಗಳಿಗೆ ನಿಖರ ಮಾಹಿತಿ ಇದ್ದರೂ ಕೂಡ ಅದನ್ನು ನಿಯಂತ್ರಣ ಮಾಡಲು ಮೇಲಧಿಕಾರಿಗಳ‌ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಡ ಹೆಚ್ಚಾಗಿರುತ್ತದೆ. ಅಬಕಾರಿ ಇಲಾಖೆಯ ಹಾಗೂ ಪೊಲೀಸರ ಸಹಕಾರವಿಲ್ಲದೆ ಈ ರೀತಿಯ ಮದ್ಯ ಸಂಗ್ರಹಣೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಸ್ಥಳೀಯ ‌ನಾಯಕರೊಬ್ಬರು.

‘ಚುನಾವಣೆಗಳು ಸಂವಿಧಾನದ ಪ್ರಕಾರ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಅಧಿಕಾರ ನೀಡುವುದಾಗಿದೆ‌. ಆದರೆ ಇಲಾಖೆಯಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರೀತಿಯ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿಯಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ. ಇವುಗಳಿಗೆ ಕಡಿವಾಣ ಹಾಕಿ ಪಾರದರ್ಶಕವಾಗಿ ಚುನಾವಣೆಗಳು ನಡೆಯುವಂತಾಗಬೇಕು’ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.