ADVERTISEMENT

ಬಾಗೇಪಲ್ಲಿ: ಬಗೆಹರಿಯದ ವಾಹನ ದಟ್ಟಣೆ ಸಮಸ್ಯೆ

ಬಾಗೇಪಲ್ಲಿ: ಪಾದಚಾರಿ ರಸ್ತೆ ಅತಿಕ್ರಮಣ, ಅಡ್ಡಾದಿಡ್ಡಿ ವಾಹನ ಚಾಲನೆ

ಪಿ.ಎಸ್.ರಾಜೇಶ್
Published 3 ಏಪ್ರಿಲ್ 2021, 5:03 IST
Last Updated 3 ಏಪ್ರಿಲ್ 2021, 5:03 IST
ಬಾಗೇಪಲ್ಲಿ ಪಟ್ಟಣದಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ
ಬಾಗೇಪಲ್ಲಿ ಪಟ್ಟಣದಲ್ಲಿ ವಾಹನಗಳ ಅಡ್ಡಾದಿಡ್ಡಿ ಸಂಚಾರ   

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆ, ಗೂಳೂರು ರಸ್ತೆಯ ಇಕ್ಕೆಲಗಳಲ್ಲಿ ಒಂದಡೆ ವ್ಯಾಪಾರಿಗಳ ಒತ್ತುವರಿ, ಮತ್ತೊಂದಡೆ ವಾಹನಗಳ ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ನಾಗರಿಕರು ಹಲವು ಬಾರಿ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ.

ಪಟ್ಟಣದ ಸಿವಿಲ್ ನ್ಯಾಯಾಲಯದ ಮುಂಭಾಗದಿಂದ ನ್ಯಾಷನಲ್ ಕಾಲೇಜಿನವರಿಗೂ 100 ಅಡಿಯ ವಿಶಾಲವಾದ ಮುಖ್ಯರಸ್ತೆ ಇದೆ. ಸಾರಿಗೆ ಬಸ್ ನಿಲ್ದಾಣದಿಂದ ಕುಂಬಾರಪೇಟೆ ವೃತ್ತದವರಿಗೂ ಹೆಚ್ಚಾಗಿ ವ್ಯಾಪಾರ-ವಹಿವಾಟುಗಳು ನಡೆಯುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಪಾದಚಾರಿ ರಸ್ತೆಯಲ್ಲಿ ಹೂವು, ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂಗಡಿಗಳ ಮಾಲೀಕರು ತಮ್ಮ ವಸ್ತುಗಳನ್ನು ಪಾದಚಾರಿ ಮಾರ್ಗದಲ್ಲಿ ಇರಿಸಿ, ಪಾದಚಾರಿ ಅತಿಕ್ರಮವನ್ನು ಮಾಡಿದ್ದಾರೆ.

ಪಾದಚಾರಿ ರಸ್ತೆಯಲ್ಲಿ ಒಂದರ ಪಕ್ಕದಲ್ಲಿ ವಾಹನಗಳು ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರು, ಪಾದಚಾರಿಗಳು ನಡು ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎಂದು ನಾಗರಿಕರು ದೂರಿದರು.

ADVERTISEMENT

ಪಟ್ಟಣದ ಮುಖ್ಯರಸ್ತೆಯಲ್ಲಿಯೇ ತಾಲ್ಲೂಕು ಕಚೇರಿ, ಪಂಚಾಯಿತಿ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಪುರಸಭೆ ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜುಗಳು ಇವೆ. ಬೆಳಿಗ್ಗೆ-ಸಂಜೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ವಿವಿಧ ಕೆಲಸಗಳಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ.

ಇದೇ ರಸ್ತೆಯಲ್ಲಿ ಸರ್ಕಾರಿ, ಖಾಸಗಿ ಬಸ್ ಗಳು ಸೇರಿದಂತೆ ಆಟೋ, ಟೆಂಪೋ, ಕಾರುಗಳನ್ನು ನಿಲ್ಲಿಸಲಾಗುತ್ತಿದೆ.ದ್ವಿಚಕ್ರ ವಾಹನ ಸವಾರರು, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಲ್ಲದೇ ಸಂಚಾರಿ ನಿಯಮಗಳನ್ನು ಪಾಲಿಸದೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಿಸುತ್ತಿದ್ದಾರೆ. ಪಟ್ಟಣದ ಡಾ.ಎಚ್.ಎನ್., ಕುಂಬಾರಪೇಟೆ, ಸಂತೇಮೈದಾನದ ರಸ್ತೆಯ ವೃತ್ತ ಹಾಗೂ ಬಸ್ ನಿಲ್ದಾಣದ ವೃತ್ತಗಳಲ್ಲಿ ಸಹ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಆಟೋ, ಕಾರು, ದ್ವಿಚಕ್ರ ವಾಹನಗಳನ್ನು ಸರತಿಸಾಲಿನಲ್ಲಿ ಪಾರ್ಕಿಂಗ್ ಮಾಡುತ್ತಿಲ್ಲ. ಹಿಂದೆ ಹಾಕಿರುವ ವಾಹನಗಳ ಸವಾರರು ವಾಹನಗಳನ್ನು ತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ಹಿರಿಯ ಪೊಲೀಸರು ಗಮನ ಹರಿಸಿ, ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡರೆ ಮಾತ್ರ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ತಿಳಿಸಿದ್ದಾರೆ.

ಜಾಗೃತಿ ಮೂಡಿಸಿ ದಂಡ ಹಾಕಿ
‘ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಅಡ್ಡಾದಿಡ್ಡಿ ಸಂಚಾರ, ಸಂಚಾರ ನಿಯಮಗಳು ಪಾಲನೆ ಆಗುತ್ತಿಲ್ಲ. ರಸ್ತೆ ಅತಿಕ್ರಮಣ ಆಗಿದೆ. ಪೊಲೀಸರು, ಪುರಸಭೆಯವರು, ಆರ್ ಟಿಓ ಅಧಿಕಾರಿಗಳು ಜಂಟಿಯಾಗಿ 15 ದಿನಗಳ ಕಾಲ ಟ್ರಾಫಿಕ್ ಸಮಸ್ಯೆ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ, ಶಿಕ್ಷೆ ನೀಡಬೇಕು. ಹೂವು, ಹಣ್ಣು, ತರಕಾರಿ ಮಾರಾಟಗಾರರಿಗೆ ಪಶುವೈದ್ಯ ಇಲಾಖೆಯ ಆವರಣದಲ್ಲಿ ಜಾಗ ಮಾಡಿ, ಮಾರುಕಟ್ಟೆ ಮಾಡಬೇಕು. ಮುಖ್ಯರಸ್ತೆಯಲ್ಲಿ ಬೀದಿವ್ಯಾಪಾರನಿರ್ಬಂಧ ಮಾಡಬೇಕು’ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ತಿಳಿಸಿದ್ದಾರೆ.

ಜನರ ಪ್ರಾಣ ಅಂಗೈಯಲ್ಲಿ
‘ಪ್ರತಿನಿತ್ಯ ಬೆಳಿಗ್ಗೆ-ಸಂಜೆ ಸಾರ್ವಜನಿಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಖ್ಯರಸ್ತೆಯಲ್ಲಿ ಸಂಚರಿಸುತ್ತಾರೆ. ಬುಲೆಟ್‌ಗಳನ್ನು ಭಾರಿ ಶಬ್ದದಿಂದ ಓಡಿಸುತ್ತಿದ್ದಾರೆ. ಕೆಲವರು ದ್ವಿಚಕ್ರ ವಾಹನಗಳನ್ನು ಜೋರಾಗಿ ಓಡಿಸುತ್ತಿದ್ದಾರೆ. ಅಡ್ಡಾದಿಡ್ಡಿ ವಾಹನಗಳ ಚಾಲನೆಯಿಂದ ಜನರು ಅಂಗೈಯಲ್ಲಿ ಪ್ರಾಣ ಇಟ್ಟುಕೊಂಡು ಸಂಚರಿಸಬೇಕಾದ ಅನಿವಾರ್ಯತೆಎದುರಾಗಿದೆ. ಪೊಲಿಸರು ಹೆಚ್ಚಿನ ಆಸಕ್ತಿ ವಹಿಸಿ ವಾಹನ ಸಂಚಾರವನ್ನು ನಿರ್ವಹಿಸಬೇಕು. ಫುಟ್‌ಪಾತ್‌ ಅತಿಕ್ರಮಣದಿಂದ ಹಿರಿಯ ನಾಗರಿಕರು ಅಲ್ಲಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಅದೂ ತೆರವಾಗಬೇಕು’ ಎಂದು ಟೆಂಕಾಯಿಮಾಕಲಪಲ್ಲಿ ಪಿ.ಎಂ. ವೆಂಕಟನಾರಾಯಣರಾವ್ ಆರೋಪಿಸಿದ್ದಾರೆ.

ಅತಿಕ್ರಮಣ ತೆರವುಗೊಳಿಸಿ
‘ಪಟ್ಟಣದ ಮುಖ್ಯರಸ್ತೆಯಲ್ಲಿ ಪೊಲೀಸರು, ಪುರಸಭೆಯವರು ರಸ್ತೆ ಅತಿಕ್ರಮಣವನ್ನು ತೆರವು ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಜನರು ಓಡಾಡುವುದೇ ಸಾಧ್ಯವಿಲ್ಲ. ರಸ್ತೆಯಲ್ಲೇ ನಡೆದಾಡಬೇಕಾಗಿದೆ. ಹೀಗಾಗಿ, ಅಪಾಯ ಹೆಚ್ಚಾಗಿದೆ. ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಾಲನೆ ಮಾಡುವವರ ಹಾಗೂ ಎಲ್ಲೆಂದರಲ್ಲಿ ನಿಲ್ಲಿಸುವವರ ವಿರುದ್ಧಪೊಲೀಸರು ಕಾನೂನು ಕ್ರಮ ಜರುಗಿಸಬೇಕು. ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು. ಪ್ರಯಾಣಿಕರ ಸುಗಮ ಸಂಚಾರಕ್ಕೆ ಪೊಲೀಸ್ ಅಧಿಕಾರಿಗಳು ಅನುವು ಮಾಡಬೇಕು’ ಎಂದು ರೈತ ಸಂಘದ ಅಧ್ಯಕ್ಷೆ ಟಿ.ಆರ್.ಪ್ರಮೀಳ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.