ADVERTISEMENT

ತೇಜಸ್ವಿ ಸೂರ್ಯ ವಿರುದ್ಧ ಕ್ರಮಕ್ಕೆ ಒತ್ತಾಯ: ರೈತ ವಿರೋಧಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 5:08 IST
Last Updated 10 ಫೆಬ್ರುವರಿ 2023, 5:08 IST
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು   

ಶಿಡ್ಲಘಟ್ಟ: ರೈತರ ಸಾಲ ಮನ್ನಾ ಮಾಡಿದರೆ, ದೇಶದ ಆರ್ಥಿಕತೆಗೆ ಯಾವುದೇ ಉಪಯೋಗವಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ನಗರದ ಬಸ್ ನಿಲ್ದಾಣದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ರೈತರು ದೇಶಕ್ಕೆ ಅನ್ನ ಕೊಡುತ್ತಾರೆ. ಅದರ ಬೆಲೆ ಗೊತ್ತಿಲ್ಲದೆ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ. ರೈತರ ವಿರುದ್ಧ ಮಾತನಾಡಿದ್ದಕ್ಕೆ ತಕ್ಷಣ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ರೈತರ ಸಾಲಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ಉಪಯೋಗವಿಲ್ಲ ಎಂಬ ತೇಜಸ್ವಿ ಸೂರ್ಯ ಹೇಳಿಕೆಯು ಖಂಡನೀಯ. ದೇಶವನ್ನು ಕೊಳ್ಳೆ ಹೊಡೆದು ದೇಶ ಬಿಟ್ಟು ಓಡಿ ಹೋದ ಕಾರ್ಪೊರೇಟ್ ಸಂಸ್ಥೆಗಳ ಸಾಲಮನ್ನಾ ಮಾಡುವ ಕೇಂದ್ರ ಸರ್ಕಾರದ ಕ್ರಮ ಸರಿ ಎಂದು ಅವರು ಬಿಂಬಿಸುತ್ತಿದ್ದಾರೆ. ದೇಶದ ಜನರ ಹಸಿವು ನೀಗಿಸುವ ರೈತನ ಸಾಲಮನ್ನಾ ಮಾಡಿದರೆ ಉಪಯೋಗವಿಲ್ಲ ಎಂದು ಹೇಳುವ ನಾಲಾಯಕ್ ತೇಜಸ್ವಿ ಸೂರ್ಯ ಸಂಸದರಾಗಿ ಮುಂದುವರೆಯಲು ಯಾವುದೇ ಅರ್ಹತೆಯಿಲ್ಲ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ADVERTISEMENT

ರೈತ ವಿರೋಧಿ ಹೇಳಿಕೆ ನೀಡಿದ ಅವರ ವಿರುದ್ಧ ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ರಾಜ್ಯ ಘಟಕದ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಉಪಾದ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ವಿ. ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರೈತರಾದ ರಾಮಚಂದ್ರಪ್ಪ, ಕೆಂಪಣ್ಣ, ಕೆಂಪರೆಡ್ಡಿ, ಕೃಷ್ಣಪ್ಪ, ಪಿ.ವಿ. ದೇವರಾಜ್, ಬಿ. ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.