ADVERTISEMENT

ವಂಡಮಾನ್ ಅಣೆಕಟ್ಟಿನ ನೀರು ಆಂಧ್ರಕ್ಕೆ- ಬಾಗೇಪಲ್ಲಿ ತಾಲ್ಲೂಕಿನ ಜನರಿಗಿಲ್ಲ ಸೌಲಭ್ಯ

ಅಧಿಕಾರಶಾಹಿ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಪಿ.ಎಸ್.ರಾಜೇಶ್
Published 23 ಅಕ್ಟೋಬರ್ 2021, 4:56 IST
Last Updated 23 ಅಕ್ಟೋಬರ್ 2021, 4:56 IST
ಬಾಗೇಪಲ್ಲಿ ತಾಲ್ಲೂಕಿನ ವಂಡಮಾನ್ ಅಣೆಕಟ್ಟು
ಬಾಗೇಪಲ್ಲಿ ತಾಲ್ಲೂಕಿನ ವಂಡಮಾನ್ ಅಣೆಕಟ್ಟು   

ಬಾಗೇಪಲ್ಲಿ: ತಾಲ್ಲೂಕಿನ ಬಿಳ್ಳೂರುಬಳಿಯ ವಂಡಮಾನ್ ಅಣೆಕಟ್ಟು ತುಂಬಿ ಹರಿಯುತ್ತಿದ್ದರೂ, ಈ ಭಾಗದ ಜನರಿಗೆ ಒಂದಿಷ್ಟು ಉಪಯೋಗವಾಗುತ್ತಿಲ್ಲ.

ವಂಡಮಾನ್ ನದಿಯಲ್ಲಿ ಹರಿಯುವ ನೀರು ತಾಲ್ಲೂಕಿನ ಜನರು ಹಾಗೂ ರೈತರಿಗೆ ಉಪಯೋಗವಾಗದೆ ಸಂಪೂರ್ಣ ಲಾಭ ಆಂಧ್ರಪ್ರದೇಶದ ಪಾಲಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪಾತಪಾಳ್ಯದ ಬೆಟ್ಟಗುಡ್ಡಗಳಲ್ಲಿ ಸಣ್ಣದಾಗಿ ಕಾಲುವೆಗಳ ಮೂಲಕ ಹರಿಯುವ ನೀರು ನಾರೇಮದ್ದೇಪಲ್ಲಿ ಬಳಿಕ ಬೃಹತ್ ಪ್ರಮಾಣದಲ್ಲಿ ಹರಿಯುತ್ತಿದ್ದು, ಆಂಧ್ರಕ್ಕೆ ಸೇರುತ್ತಿದೆ.

ಬಿಳ್ಳೂರು ಬಳಿ 90ರ ದಶಕದಲ್ಲಿ ವಂಡಮಾನ್ ಅಣೆಕಟ್ಟು ನಿರ್ಮಿಸಲಾಗಿದೆ. ಕೆರೆ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಆ ಭಾಗದ ರೈತರು ನೀರನ್ನು ಕುಡಿಯುವ ನೀರು, ಅಂರ್ತಜಲ ವೃದ್ಧಿ ಹಾಗೂ ಕೃಷಿಗೆ ಬಳಸಿಕೊಳ್ಳಬಹುದು ಎಂಬ ಉತ್ಸಾಹದಲ್ಲಿದ್ದರು. ಬರಡು ಬಿದ್ದ ಜಮೀನು, ಹೊಲ, ಗದ್ದೆಗಳಿಗೆ ನೀರು ಹರಿಸಿ ವಾರ್ಷಿಕವಾಗಿ ಮೂರು ಬೆಳೆ ಬೆಳೆಯಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಅಕ್ಕಪಕ್ಕದ ತೆರೆದ ಬಾವಿ, ಕೊಳವೆಬಾವಿಗಳಲ್ಲಿ ಯಥೇಚ್ಛವಾಗಿ ನೀರು ಲಭಿಸಲಿದೆ ಎಂದುಕೊಂಡಿದ್ದರು. ಇದೀಗ ಎಲ್ಲವೂ ವ್ಯರ್ಥವಾಗಿದೆ.

ADVERTISEMENT

ಅಣೆಕಟ್ಟು ತುಂಬಿ ಹರಿಯುತ್ತಿದ್ದರೂ ಒಂದು ಎಕರೆಗೆ ನೀರು ಹರಿಸಲು ಆಗುತ್ತಿಲ್ಲ. ಯಾವುದೇ ಗ್ರಾಮಕ್ಕೂ ಕುಡಿಯುವ ನೀರು ಹರಿಸಲು ಆಗಿಲ್ಲ. ಇದು ಈ ಭಾಗದ ರೈತರು ಹಾಗೂ ಜನರಲ್ಲಿ ಆಕ್ರೋಶವನ್ನು
ಹುಟ್ಟುಹಾಕಿದೆ.

ಸಂಗ್ರಹವಾದ ನೀರನ್ನು ಸುಮಾರು 70 ಗ್ರಾಮಗಳಿಗೆ ಪೈಪ್‌ಲೈನ್ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್‌ ಮೂಲಕ ಹರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪಂಪ್‌ಹೌಸ್ ಕೂಡ ನಿರ್ಮಿಸಲಾಗಿದೆ. ವಂಡಮಾನ್ ಕೆರೆಯ ಮೇಲ್ಭಾಗದಲ್ಲಿ ನೀರು ಸಂಗ್ರಹವಾಗಿದ್ದು ನೀರು ಸಂಪೂರ್ಣವಾಗಿ ಅರ್ಧ ಕಿಲೋಮೀಟರ್ ದೂರದಲ್ಲಿ ಇರುವ ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿದೆ.

ಕೆರೆಯ ಕಟ್ಟೆ ಕೆಳಭಾಗದಲ್ಲಿ ಆಂಧ್ರಪ್ರದೇಶದ ಜಮೀನುಗಳಿವೆ. ಅಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿ ಆಗುತ್ತಿದೆ. ಈ ಯೋಜನೆಯ ಸಂಪೂರ್ಣ ಲಾಭ ಆಂಧ್ರದ ಪಾಲಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಮೌನವಹಿಸಿದ್ದಾರೆ. ನಿಂತ ನೀರು ಹಾಗೂ ಹರಿಯುವ ನೀರಿನಿಂದಲೂ ಈ ಭಾಗದ ಜನರಿಗೆ ಒಂದಿಷ್ಟು ಉಪಯೋಗ ಆಗುತ್ತಿಲ್ಲ. ನೀರನ್ನು ಬಳಸಿಕೊಳ್ಳುವಲ್ಲಿ ಮತ್ತು ಹೆಚ್ಚುವರಿ ನೀರಾವರಿ ಯೋಜನೆ ರೂಪಿಸಲು ಅಧಿಕಾರಿಗಳು ಸಿದ್ಧವಾಗಿಲ್ಲ ಎಂದು ಇಲ್ಲಿನ ರೈತರ
ಆರೋಪ.

ಸಂಗ್ರಹವಾಗಿರುವ ನೀರನ್ನು ಬಿಳ್ಳೂರು, ನಾರೇಮದ್ದೇಪಲ್ಲಿ, ಸೋಮನಾಥಪುರ ವ್ಯಾಪ್ತಿಯ 100 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಪೂರೈಸುವ ಕೆಲಸ ಆಗಬೇಕಾಗಿದೆ. ಕೃಷಿ ಬಳಕೆಗೆ ಹೆಚ್ಚುವರಿ ನೀರನ್ನು ಪೂರಕ ಕಾಲುವೆಗಳನ್ನು ಮಾಡಿ ಪೂರೈಸಬೇಕು. ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಕೆರೆಯಲ್ಲಿ ಹೂಳು, ಕಸ-ಕಡ್ಡಿ, ಕಳೆ ಹಾಗೂ ಮುಳ್ಳಿನ ಗಿಡಗಳನ್ನು ತೆರವು ಮಾಡಿಸಬೇಕು. ಮೀನುಗಾರಿಕೆಗೆ ಉತ್ತಮ ಅವಕಾಶವಿದ್ದು, ಮೀನು ಮರಿ ಉತ್ಪಾದನಾ ಘಟಕ ತೆರೆದು ಅನುಕೂಲ ಮಾಡಿಕೊಡಬೇಕು ಎಂಬುದು ರೈತರ ಒತ್ತಾಯ.

‘30 ವರ್ಷಗಳ ಹಿಂದೆ ನಿರ್ಮಿಸಿರುವ ವಂಡಮಾನ್ ಅಣೆಕಟ್ಟು ತುಂಬಿ ಹರಿದು ನೀರು ಆಂಧ್ರಪ್ರದೇಶದ ಪಾಲಾಗಿದೆ. ಬೆಟ್ಟದ ಮೇಲೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೂ ಯಾರಿಗೂ ಉಪಯೋಗ ಆಗಿಲ್ಲ. ನೀರು ಸರಬರಾಜು ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ’ ಎಂದು ರೈತ ಮುಖಂಡ ಉಗ್ರಾಣಂಪಲ್ಲಿ ಎಂ.ಎಸ್. ನರಸಿಂಹಾರೆಡ್ಡಿ ದೂರಿದರು.

‘ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳು ಇಲ್ಲ. ಮಳೆಯ ನೀರು ಇಂಗಿಸುವ, ಸಂಗ್ರಹವಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಣೆಕಟ್ಟು ತುಂಬಿ ಹರಿಯುತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳು ಜಾರಿಗೊಂಡಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಬೇಕು’ ಎಂದು ರೈತರಾದ ಬೈಯ್ಯಾರೆಡ್ಡಿ, ಗೋವಿಂದರೆಡ್ಡಿ, ತುಮ್ಮಲ ಶ್ರೀನಿವಾಸ್ ಒತ್ತಾಯಿಸಿದರು.

‘ಅಣೆಕಟ್ಟಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಇಲ್ಲ. ಅಭಾವ ಕಂಡುಬಂದರೆ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುವುದು. ಅಣೆಕಟ್ಟಿನಲ್ಲಿ ಹೂಳು, ಕಳೆ, ಮುಳ್ಳಿನ ಗಿಡಗಳನ್ನು ತೆರವು ಮಾಡಿಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಹೆಚ್ಚುವರಿ ಪ್ರಭಾರ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಸ್. ರಾಮಲಿಂಗಾರೆಡ್ಡಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.