ADVERTISEMENT

‌ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಮನೆಗಳಲ್ಲಿ ಲಕ್ಷ್ಮಿದೇವಿಗೆ ಅಲಂಕಾರ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:14 IST
Last Updated 9 ಆಗಸ್ಟ್ 2025, 6:14 IST
ಚಿಕ್ಕಬಳ್ಳಾಪುರದ ಕೆ.ಎಂ.ಮುನೇಗೌಡ ಅವರ ಮನೆಯಲ್ಲಿ ವರಮಹಾಲಕ್ಷ್ಮಿಯ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕೂರಿಸಿರುವುದು
ಚಿಕ್ಕಬಳ್ಳಾಪುರದ ಕೆ.ಎಂ.ಮುನೇಗೌಡ ಅವರ ಮನೆಯಲ್ಲಿ ವರಮಹಾಲಕ್ಷ್ಮಿಯ ಮೂರ್ತಿಯನ್ನು ಉಯ್ಯಾಲೆಯಲ್ಲಿ ಕೂರಿಸಿರುವುದು   

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರ ಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯ ಜನರು ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

ಹೆಣ್ಣು ಮಕ್ಕಳು ಮನೆಯ ಮುಂದೆ ವಿವಿಧ ಬಣ್ಣಗಳಿಂದ ರಂಗೋಲಿ ಬಿಡಿಸಿ, ಮನೆಯ ಬಾಗಿಲುಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಯನೆಲ್ಲಾ ಶೃಂಗರಿಸಿ ಹೊಸ ಸೀರೆಯನ್ನುಟ್ಟು ಭಕ್ತಿ ಭಾವದಿಂದ ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದರು.

ಲಕ್ಷ್ಮಿದೇವಿಗೆ ಅಲಂಕಾರ: ಮಹಿಳೆಯರು ಮನೆಯಲ್ಲಿಯೇ ಕಳಸದ ಮೇಲೆ ಲಕ್ಷ್ಮಿದೇವಿ ವಿವಿಧ ಲೋಹಗಳಿಂದ ಮಾಡಿದ ಮುಖವಾಡವನಿಟ್ಟು,  ಕಳಸಕ್ಕೆ ಬೆಳ್ಳಿಯ ಮೂರ್ತಿಯನ್ನಿಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳು ಹಾಕಿ, ಹೊಸ ಸೀರೆಯಿಂದ ಅಲಂಕರಿಸಿ, ಅದರ ಸುತ್ತಲೂ ಮಾವಿನ ಎಲೆ ಕಟ್ಟಿ, ಬಾಳೆಕಂಬಗಳನ್ನು ಇಟ್ಟು, ವಿವಿಧ ಹೂವುಗಳಿಂದ ಅಲಂಕರಿಸಿದರು.

ADVERTISEMENT

ಲಕ್ಷ್ಮಿದೇವಿಗೆ ಪೂಜೆ ಮಾಡಿದ ಬಳಿಕ ಅಕ್ಕಪಕ್ಕದ ಮನೆಯ ಸುಮಂಗಲಿಯರನ್ನು ಮನೆಗೆ ಕರೆದು ಅರಿಶಿನ, ಕುಂಕುಮ, ಹೂವು, ರವಿಕೆ ಬಟ್ಟೆ ಹಾಗೂ ಎಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಕಳುಹಿಸುತ್ತಿದ್ದರು.

ವಿವಿಧ ಖಾದ್ಯಗಳು: ಲಕ್ಷ್ಮಿದೇವಿಯ ಮೂರ್ತಿ ಮುಂಭಾಗ ಹಣ್ಣು, ಹಂಪಲು ಹಾಗೂ ವಿಶೇಷ ಸಿಹಿ ತಿನಿಸುಗಳನ್ನಿಡಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕರು ಮನೆಯಲ್ಲಿ ಸಿಹಿ ತಿನಿಸು ಮಾಡಲಾಗಿತ್ತು. ಹೋಳಿಗೆ, ಪಾಯಸ, ಜೊತೆಗೆ ಹಪ್ಪಳ, ತರಕಾರಿ ಪಲ್ಯ ಮತ್ತಿತರ ಖಾದ್ಯಗಳನ್ನು ತಯಾರಿಸಿ ವರ ಮಹಾಲಕ್ಷ್ಮಿಗೆ ನೈವೈದ್ಯ ಮಾಡಿದರು.

ವಿಶೇಷ ಪೂಜೆ: ಚಿಕ್ಕಬಳ್ಳಾಪುರದ ಮೈಲಪ್ಪನಹಳ್ಳಿ ಸಮೀಪವಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವರಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ವರ ಮಹಾಲಕ್ಷ್ಮಿಯನ್ನು ಭಕ್ತಿ ಭಾವದಿಂದ ನಮಿಸಿದರು.

ಚಿಕ್ಕಬಳ್ಳಾಪುರದ ರೇಣುಕಾ ಆರಾಧ್ಯ ಮನೆ  ವರಮಹಾಲಕ್ಷ್ಮಿಗೆ ಆರತಿ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.