ಚಿಂತಾಮಣಿ: ಸರ್ಕಾರದಿಂದ ಮಂಜೂರಾಗಬೇಕಾದ ಜಮೀನಿಗೆ ಒತ್ತಾಯಿಸಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕ ಶಿವಾನಂದ ರೆಡ್ಡಿ ಅವರ ಕುಟುಂಬಸ್ಥರ ಪೈಕಿ ಮಾಜಿ ಯೋಧನ ಪತ್ನಿ ಕಾಂತಮ್ಮ ಅಸ್ವಸ್ಥರಾಗಿದ್ದಾರೆ.
ಹೀಗಾಗಿ, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ತಹಶೀಲ್ದಾರ್ ಸುದರ್ಶನ್ ಯಾದವ್ ಆಸ್ಪತ್ರೆಗೆ ಭೇಟಿ ನೀಡಿ, ಕಾಂತಮ್ಮ ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಅಂಬಾಜಿದುರ್ಗ ಹೋಬಳಿಯ ರಾಯಪ್ಪಲ್ಲಿ ಗ್ರಾಮದ ಮಾಜಿ ಸೈನಿಕ ಶಿವಾನಂದರೆಡ್ಡಿ ಹಲವು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇನೆಯಲ್ಲಿದ್ದಾಗ ಗಡಿ ಭಾಗದಲ್ಲಿ ನಡೆದ ಅಪಘಾತದಲ್ಲಿ ಕಾಲಿಗೆ ತೀವ್ರ ಪೆಟ್ಟಾಗಿ, ಕಡ್ಡಾಯ ನಿವೃತ್ತಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಜಮೀನು ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೇನಾಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದರು. ಶಿವಾನಂದರೆಡ್ಡಿ ಅವರು ನಿವೃತ್ತಿಯಾಗಿ ಎರಡೂವರೆ ದಶಕ ಕಳೆದಿದೆ. ಆದರೆ, ಜಮೀನು ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.