ADVERTISEMENT

ಪರಿಷತ್ ಚುನಾವಣೆ; ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಹಿಳಾ ಮತದಾರರು ಅಧಿಕ

ಡಿ.ಎಂ.ಕುರ್ಕೆ ಪ್ರಶಾಂತ
Published 29 ನವೆಂಬರ್ 2021, 21:30 IST
Last Updated 29 ನವೆಂಬರ್ 2021, 21:30 IST
ಎಂ.ಎಲ್‌.ಅನಿಲ್‌ಕುಮಾರ್‌
ಎಂ.ಎಲ್‌.ಅನಿಲ್‌ಕುಮಾರ್‌   

ಚಿಕ್ಕಬಳ್ಳಾಪುರ: ವಿಧಾನ ಪರಿಷತ್ ಚುನಾವಣೆ ಜಿಲ್ಲೆಯಲ್ಲಿ ಕಾವೇರಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಗ್ರಾಮ ಪಂಚಾಯಿತಿ ಸದಸ್ಯರ ಆಂತರಿಕ ಸಭೆಗಳನ್ನು ನಡೆಸುತ್ತಿವೆ. ಆಯಾ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸಿರುವವರಿಗೆ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಗರಿಷ್ಠ ಮತ ಕೊಡಿಸಬೇಕು ಎಂದು ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ. ಶಾಸಕರು, ಮುಖಂಡರಿಗೆ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆ ಎನ್ನುವಂತೆ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 2,675 ಮತದಾರರು ಇದ್ದಾರೆ. ಇವರಲ್ಲಿ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಮಹಿಳಾ ಮತದಾರರು 1,417 ಹಾಗೂ ಪುರುಷ ಮತದಾರರು 1,258 ಮಂದಿ ಇದ್ದಾರೆ. ಕೋಲಾರ ಜಿಲ್ಲೆಯಲ್ಲಿಯೂ ಮಹಿಳಾ ಮತದಾರರದ್ದೇ ಪ್ರಾಬಲ್ಯ. ಕೋಲಾರ ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಒಟ್ಟು 5,600 ಮತದಾರರು ಇದ್ದಾರೆ. 2,925 ಮಂದಿ ಮಹಿಳೆಯರು ಹಾಗೂ 2,675 ಪುರುಷ ಮತದಾರರು ಇದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರೇ ಗರಿಷ್ಠ ಸಂಖ್ಯೆಯ ಮತದಾರರಾಗಿದ್ದಾರೆ. ಯಾವುದೇ ಪಕ್ಷಗಳ ಚಿಹ್ನೆಯಡಿ ಪಂಚಾಯಿತಿ ಸದಸ್ಯರು ಗೆಲುವು ಸಾಧಿಸದಿದ್ದರೂ ಒಂದಲ್ಲಾ ಒಂದು ಪಕ್ಷದ ಬೆಂಬಲಿಗರೇ ಆಗಿರುತ್ತಾರೆ. ಪಂಚಾಯಿತಿ ಮಟ್ಟದಲ್ಲಿ ಆಯಾ ಪಕ್ಷಗಳಿಗೆ ಇವರೇ ಪ್ರಮುಖ ಕಾರ್ಯಕರ್ತರು ಸಹ.

ADVERTISEMENT

ಬಿಜೆಪಿ ಶಾಸಕರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾತ್ರ ಇದ್ದಾರೆ. ಉಳಿದಂತೆ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಹಾಗೂ ಚಿಂತಾಮಣಿಯಲ್ಲಿ ಜೆಡಿಎಸ್ ಶಾಸಕರು ಇದ್ದಾರೆ.

ಬಿಜೆಪಿಗೆ ಸುಧಾಕರ್ ಬಲ:ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಮುಖ ಬಲವೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್. ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್, ಸಚಿವ ಸುಧಾಕರ್ ಅವರ ನಾಮಬಲವನ್ನೇ ಜಿಲ್ಲೆಯಲ್ಲಿ ಜಪಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿಯೂ ಪ್ರಭಾವ ಬೀರಿ ತಮಗೆ ಮತಗಳನ್ನು ದೊರಕಿಸಿಕೊಡುತ್ತಾರೆ ಎನ್ನುವ ಅಚಲ ವಿಶ್ವಾಸ ವೇಣುಗೋಪಾಲ್ ಅವರದ್ದು.

ಜಿಲ್ಲೆಯಲ್ಲಿ ನಡೆಯುವ ಪ್ರಚಾರ ಸಭೆಗಳಲ್ಲಿ ಅವರು ಸುಧಾಕರ್ ಅವರನ್ನೇ ಮುಂದಿಟ್ಟುಕೊಂಡು ಮತಕೇಳುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಗರಿಷ್ಠ ಸಂಖ್ಯೆಯ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆ ಆಗಿದ್ದು ಇವರು ಸುಧಾಕರ್ ಅಣತಿಯಂತೆ ನಡೆಯುವರು ಎನ್ನಲಾಗುತ್ತಿದೆ. ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಬಲವೇನೂ ಇಲ್ಲ.

ಕಾಂಗ್ರೆಸ್‌ಗೆ ಶಾಸಕರ ಬಲ: ಗೌರಿಬಿದನೂರಿನಲ್ಲಿ ಶಿವಶಂಕರರೆಡ್ಡಿ, ಬಾಗೇಪಲ್ಲಿಯಲ್ಲಿ ಸುಬ್ಬಾರೆಡ್ಡಿ ಮತ್ತು ಶಿಡ್ಲಘಟ್ಟದಲ್ಲಿ ವಿ.ಮುನಿಯಪ್ಪ ಅವರ ಬಲ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಶಾಸಕರನ್ನು ಹೊಂದಿರುವುದು ‌‌ಅನಿಲ್ ಕುಮಾರ್ ಅವರಿಗೆ ಶಕ್ತಿ ಎನಿಸಿದೆ.

ಶಾಸಕರ ನಾಮಬಲವನ್ನು ಅನಿಲ್ ಹೆಚ್ಚು ನಂಬಿಕೊಂಡಿದ್ದಾರೆ. ಮೂವರು ಶಾಸಕರನ್ನು ಹೊಂದಿರುವ ಕಾರಣ ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸ ಕಾಂಗ್ರೆಸ್‌ಗೆ ಇದೆ. ಕಳೆದ ಬಾರಿಯ ಪರಿಷತ್ ಚುನಾವಣೆಯಲ್ಲಿ ನಡೆಸಿದ ಕ್ಷೇತ್ರ ಅಧ್ಯಯನ ಮತ್ತು ಸದಸ್ಯರ ಸಂಪರ್ಕದ ಬಲವೂ ಅನಿಲ್ ಅವರಿಗೆ ಇದೆ.

ಜೆಡಿಎಸ್ ಮುಖಂಡರಿಗೆ ತಾಲೀಮು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಜೆಡಿಎಸ್ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಘೋಷಿಸಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಆಯಾ ಕ್ಷೇತ್ರಗಳ ಎಲ್ಲ ಚುನಾವಣೆಗಳ ಜವಾಬ್ದಾರಿ ಈ ಘೋಷಿತ ಅಭ್ಯರ್ಥಿಗಳದ್ದೇ ಆಗಿದೆ.

ಗೌರಿಬಿದನೂರಿನಲ್ಲಿ ನರಸಿಂಹಮೂರ್ತಿ, ಬಾಗೇಪಲ್ಲಿಯಲ್ಲಿ ಡಿ.ಜೆ.ನಾಗರಾಜರೆಡ್ಡಿ, ಶಿಡ್ಲಘಟ್ಟದಲ್ಲಿ ಮೇಲೂರು ರವಿಕುಮಾರ್, ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಚೇಗೌಡ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ, ಚಿಂತಾಮಣಿಯಲ್ಲಿ ಎಂ.ಕೃಷ್ಣಾರೆಡ್ಡಿ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಅವರ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ತಾಲೀಮು ಎನ್ನುವ ರೀತಿಯಲ್ಲಿ ಜೆಡಿಎಸ್ ಮುಖಂಡರಿಗೆ ಈ ಚುನಾವಣೆ ಒದಗಿ ಬಂದಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಮತ್ತೆ ಪಕ್ಷದ ತೆಕ್ಕೆಗೆ ಕ್ಷೇತ್ರ ಬರಲಿದೆ ಎನ್ನುವ ವಿಶ್ವಾಸ ಜೆಡಿಎಸ್ ನಾಯಕರಲ್ಲಿದೆ.

ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಇರುತ್ತಿತ್ತು. ಈ ಬಾರಿ ತ್ರಿಕೋನ ಸ್ಪರ್ಧೆಯ ಚಿತ್ರಣ ಮೇಲ್ನೋಟಕ್ಕಿದೆ.

***

ತಾಲ್ಲೂಕು;ಒಟ್ಟು ಸ್ಥಳೀಯ ಸಂಸ್ಥೆಗಳು;ಪುರುಷ ಮತದಾರರು;ಮಹಿಳಾ ಮತದಾರರು;ಒಟ್ಟು
ಬಾಗೇಪಲ್ಲಿ;26;188;237;425
ಗುಡಿಬಂಡೆ;9;60;72;132
ಗೌರಿಬಿದನೂರು;39;304;339;643
ಚಿಕ್ಕಬಳ್ಳಾಪುರ;24;201;217;418
ಶಿಡ್ಲಘಟ್ಟ;29;220;233;453
ಚಿಂತಾಮಣಿ;36;285;319;604
ಒಟ್ಟು;163;1,258;1,417;2,675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.