
ಚಿಂತಾಮಣಿ: ತಾಲ್ಲೂಕಿನ ಕರಿಯಪ್ಪಲ್ಲಿಯಲ್ಲಿ ₹6 ಕೋಟಿ ವೆಚ್ಚದ ಚಿಂತಾಮಣಿ–ಮುರುಗಮಲ್ಲ ರಸ್ತೆ ಅಭಿವೃದ್ಧಿ ಕಾಮಗಾರಿ, ಗೋಪಸಂದ್ರ ಗ್ರಾಮದ ಪರಿಶಿಷ್ಟ ಕಾಲೊನಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಕಿಂಚಿತ್ತು ಗಮನಹರಿಸದೆ ಕೇವಲ ಬಾಯಿ ಚಪಲಕ್ಕೆ ಸುಳ್ಳು ಹೇಳುವುದರಲ್ಲೇ ಕಾಲ ಕಳೆಯುವವರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.
ಜನರ ಬದುಕಿನಲ್ಲಿ ಬದಲಾವಣೆ ತರುವವರು, ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಡುವವರು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವವರು ಮತ್ತು ಅಗತ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ಜನರು ಚಿಂತನೆ ಮಾಡಬೇಕು. ಕೇವಲ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡವರನ್ನು ಜನರು ಪ್ರಶ್ನಿಸಬೇಕು ಎಂದು ಹೇಳಿದರು.
76 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಪಾಲಿಟೆಕ್ನಿಕ್ ಅನ್ನು ₹76 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಹಿಳಾ ಕಾಲೇಜಿಗೆ ₹23 ಕೋಟಿ, ಬಾಲಕರ ಕಾಲೇಜಿಗೆ ₹27 ಕೋಟಿ ಅನುದಾನ ಮಂಜೂರಾಗಿದೆ. ಎಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ₹160 ಕೋಟಿಯಲ್ಲಿ ನಿರ್ಮಿಸಲಾಗುತ್ತಿದೆ. ಎಂಜಿನಿಯರ್ ವಿದ್ಯಾರ್ಥಿಗಳು 3ನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾರೆ. ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ ₹500 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಗೋಪಸಂದ್ರ ಗ್ರಾಮದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹13 ಲಕ್ಷ, ಕಾಗತಿ ಮತ್ತು ದಿಗೂರು ಗ್ರಾಮಗಳ ಅಚ್ಚುಕಟ್ಟಿನಲ್ಲಿರುವ ವೇಣುಗೋಪಾಲ ದೇವಾಲಯ ಅಭಿವೃದ್ಧಿಗೆ ₹10 ಲಕ್ಷ, ಬುಕ್ಕನಹಳ್ಳಿ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹43 ಲಕ್ಷ ಸೇರಿ ಒಟ್ಟು ₹6.73 ಕೋಟಿ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರುಳ್ಳಿ ಶಿವಣ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು, ಊಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ,ಉಪಾಧ್ಯಕ್ಷೆ ಕವಿತಾ, ಮಂಜುನಾಥರೆಡ್ಡಿ, ಅಶ್ವತ್ಥರೆಡ್ಡಿ, ಮಣಿಕಂಠ, ಮಾಡಿಕೆರೆ ಈರಪ್ಪರೆಡ್ಡಿ, ಶ್ರೀಧರ್, ಶ್ರೀನಿವಾಸರೆಡ್ಡಿ, ಕರಿಯಪಲ್ಲಿ ಮಾಲಿಕ್ ಪಾಷಾ, ಪುಂಗನೂರ್ ನಾರಾಯಣಸ್ವಾಮಿ, ಸೈಯದ್ ಏಜಾಜ್, ಅಮ್ಜದ್ ಪಾಷಾ, ಹಾಜಿ ಅನ್ಸರ್ ಖಾನ್, ಲಕ್ಷ್ಮಿನಾರಾಯಣ ರೆಡ್ಡಿ, ಕೆ.ಎನ್. ಅನಿಲ್ ಕುಮಾರ, ನರಸಿಂಹಮೂರ್ತಿ, ರಾಜಣ್ಣ, ವೆಂಕಟರಾಮರೆಡ್ಡಿ ಶ್ರೀನಾಥ್ ಉಪಸ್ಥಿತರಿದ್ದರು.
ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ
ನಾನು ಶಾಸಕನಾಗಿದ್ದ 2008ರಿಂದ 2013ರವರೆಗಿನ ಅವಧಿಯಲ್ಲಿ ನಗರಕ್ಕೆ ಹೊಂದಿಕೊಂಡ ಗೋಪಸಂದ್ರ ಮಾರುತಿ ಬಡಾವಣೆ ಮತ್ತು ಕರಿಯಪಲ್ಲಿ ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆಯನ್ನು ಮಾಡಿಸಿದ್ದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಒಳಚರಂಡಿ ವ್ಯವಸ್ಥೆ ಹಾಳಾಗಿದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು. ಒಳಚರಂಡಿ ವ್ಯವಸ್ಥೆಯನ್ನು ಮತ್ತೆ ಸರಿಪಡಿಸಲು ಕಾಮಗಾರಿ ಆರಂಭಿಸಲಾಗುವುದು. ಈ ಹಿಂದೆ ಹಾಕಲಾಗಿದ್ದ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಬಗ್ಗೆ ಜನರು ತಿಳಿಸಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.