ADVERTISEMENT

ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 4:06 IST
Last Updated 19 ಜುಲೈ 2021, 4:06 IST
ಬಾಗೇಪಲ್ಲಿ ಪಟ್ಟಣ ಹೊರವಲಯದ ಟಿ.ಬಿ. ಕ್ರಾಸ್‌ನಲ್ಲಿನ ರಾಷ್ಟ್ರೀಯ ಹೆದ್ದಾರಿ-7ರ ಮೇಲುಸೇತುವೆ ಕೆಳಗಿನ ರಸ್ತೆ ಜಲಾವೃತವಾಗಿರುವುದು
ಬಾಗೇಪಲ್ಲಿ ಪಟ್ಟಣ ಹೊರವಲಯದ ಟಿ.ಬಿ. ಕ್ರಾಸ್‌ನಲ್ಲಿನ ರಾಷ್ಟ್ರೀಯ ಹೆದ್ದಾರಿ-7ರ ಮೇಲುಸೇತುವೆ ಕೆಳಗಿನ ರಸ್ತೆ ಜಲಾವೃತವಾಗಿರುವುದು   

ಬಾಗೇಪಲ್ಲಿ: ತಾಲ್ಲೂಕು ಹಾಗೂ ಪಟ್ಟಣದಲ್ಲಿ ಶನಿವಾರ ಉತ್ತಮ ಮಳೆ ಸುರಿಯಿತು.

ಪಟ್ಟಣದ ಮುಖ್ಯರಸ್ತೆ, ರಾಷ್ಟ್ರೀಯ ಹೆದ್ದಾರಿ-7ರ ಟಿ.ಬಿ. ಕ್ರಾಸ್ ಮೇಲುಸೇತುವೆ ರಸ್ತೆ ಸೇರಿದಂತೆ ವಿವಿಧ ವಾರ್ಡ್‍ಗಳು, ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳೆಲ್ಲಾ ಕೆಸರುಮಯವಾಗಿದ್ದು, ಕೆಲವೆಡೆ ಚರಂಡಿ ನೀರು ಮನೆಗಳಿಗೆ ನುಗ್ಗಿದೆ.

ಅಂಬೇಡ್ಕರ್, ವಾಲ್ಮೀಕಿ, ಕಾರ್ಮಿಕರ ಕಾಲೊನಿಗಳು ಸೇರಿದಂತೆ ವಿವಿಧೆಡೆ ಚರಂಡಿಗಳು ತುಂಬಿ ಹರಿದಿದ್ದು, ಕಲುಷಿತ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ADVERTISEMENT

ಹೊರವಲಯದ ಟಿ.ಬಿ. ಕ್ರಾಸ್‌ಗೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದರಿಂದ ಅಂಗಡಿಗಳು, ಮಳಿಗೆಗಳಿಗೂ ನೀರು ನುಗ್ಗಿದೆ. ಜನರು ಮೋಟಾರ್‌ ಪಂಪ್ ಬಳಸಿ ಮಳೆ ನೀರನ್ನು ಹೊರಹಾಕಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರಸ್ತೆಗಳು ಕೆಸರುಮಯವಾಗಿವೆ. ಕೊಳೆತ ತರಕಾರಿಗಳು ರಸ್ತೆಗಳಲ್ಲಿ ಹರಡಿದ್ದು, ದುರ್ನಾತ ಬೀರುತ್ತಿದೆ. ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಮಾರುಕಟ್ಟೆಗೆ ಸಂಚರಿಸಲು ಜನರು ಸರ್ಕಸ್ ಮಾಡುವಂತಾಯಿತು.

ತಾಲ್ಲೂಕಿನ ವಿವಿಧೆಡೆ ಹೊಲ, ಗದ್ದೆಗಳು ಜಲಾವೃತವಾಗಿವೆ. ಚೆಕ್ ಡ್ಯಾಂಗಳು, ಕುಂಟೆ, ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಟೊಮೆಟೊ, ಮೂಲಂಗಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿದ್ದು, ರೈತರು ತೊಂದರೆಗೆ ಸಿಲುಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-7ರ ಟಿ.ಬಿ. ಕ್ರಾಸ್‌ನ ಮೇಲುಸೇತುವೆ ರಸ್ತೆ ಜಲಾವೃತಗೊಂಡಿದೆ. ಇದರಿಂದ ಆಂಧ್ರಪ್ರದೇಶದ ಕಡೆಯಿಂದ ಮತ್ತು ಬೆಂಗಳೂರು ಕಡೆಗೆ ಹೋಗಿ, ಬರುವ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅವೈಜ್ಞಾನಿಕವಾಗಿ ಮೇಲುಸೇತುವೆ ಕೆಳಭಾಗದ ರಸ್ತೆ ನಿರ್ಮಿಸಲಾಗಿದೆ. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಮೇಲುಸೇತುವೆಯ ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ತಿಂಡಿ, ತಿನಿಸು ಮಾರುವವರು ಸೇತುವೆ ಮೇಲೆ ಪ್ಲಾಸ್ಟಿಕ್, ತ್ಯಾಜ್ಯ ಸುರಿಯುತ್ತಾರೆ. ಇದರ ಪರಿಣಾಮ ರಸ್ತೆಗಳಲ್ಲಿ ತ್ಯಾಜ್ಯತುಂಬಿಕೊಂಡಿದೆ. ಕೂಡಲೇ ಪ್ರಾಧಿಕಾರದವರು ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಡಿಯುವಂತೆ ಮಾಡಬೇಕು’ ಎಂದು ಇಲ್ಲಿನ ನಿವಾಸಿ ಪ್ರದೀಪ್ ರೆಡ್ಡಿ ಒತ್ತಾಯಿಸಿದರು.

‘ಪಟ್ಟಣದ ಸುತ್ತಮುತ್ತಲೂ ಅನೇಕ ರಾಜಕಾಲುವೆಗಳಿವೆ. ಕೆಲವೆಡೆ ಒತ್ತುವರಿಯಾಗಿವೆ. ಸೂಕ್ತ ನಿರ್ವಹಣೆ ಕೊರತೆಯಿಂದ ರಾಜಕಾಲುವೆಗಳಲ್ಲಿ ಚರಂಡಿ ನೀರಿನ ಜೊತೆ ಮಳೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಈ ನೀರು ಮನೆಗಳಿಗೂ ನುಗ್ಗಿದೆ’ ಎಂದು ವಾಲ್ಮೀಕಿ ನಗರದ ನಿವಾಸಿ ಚನ್ನರಾಯಪ್ಪ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.