ADVERTISEMENT

ಲಕ್ಷಾಂತರ ಲೀಟರ್ ನೀರು ಪೋಲು

ನಗರೋತ್ಥಾನ ಯೋಜನೆ ಕಾಮಗಾರಿ ಸ್ಥಳದಲ್ಲಿ ಜಕ್ಕಲ ಮಡುಗು ಪೈಪ್‌ಲೈನ್‌ಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 15:51 IST
Last Updated 21 ಜೂನ್ 2019, 15:51 IST
ಎಂ.ಜಿ.ರಸ್ತೆಯಲ್ಲಿ ಶುಕ್ರವಾರ ಪೋಲಾಗಿ ಹರಿದ ನೀರು
ಎಂ.ಜಿ.ರಸ್ತೆಯಲ್ಲಿ ಶುಕ್ರವಾರ ಪೋಲಾಗಿ ಹರಿದ ನೀರು   

ಚಿಕ್ಕಬಳ್ಳಾಪುರ: ಬರ ತಲೆದೋರಿ ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ಹೊತ್ತಿನಲ್ಲಿಯೇ ನಗರದ ಎಂ.ಜಿ.ರಸ್ತೆಯಲ್ಲಿ ಜಕ್ಕಲಮಡಗು ಜಲಾಶಯದಿಂದ ಪೈಪ್‌ಲೈನ್‌ಗೆ ಧಕ್ಕೆಯಾಗಿ ಶುಕ್ರವಾರ ಲಕ್ಷಾಂತರ ಲೀಟರ್‌ ನೀರು ಪೋಲಾಗಿ ಹರಿಯಿತು.

ಎಂ.ಜಿ.ರಸ್ತೆಯಲ್ಲಿ ಚೆನ್ನಯ್ಯ ಉದ್ಯಾನದ ಬದಿ ಶುಕ್ರವಾರ ಬೆಳಿಗ್ಗೆ ನಗರೋತ್ಥಾನ ಯೋಜನೆ ಅಡಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಿದ ವೇಳೆ ಜಕ್ಕಲಮಡುಗು ಪೈಪ್‌ಲೈನ್‌ಗೆ ಹಾನಿಯಾಗಿದೆ. ನಗರಸಭೆ ಸಿಬ್ಬಂದಿ ತಿಪ್ಪೇನಹಳ್ಳಿ ಬಳಿ ಇರುವ ನೀರು ಶುದ್ಧೀಕರಣ ಘಟಕದಿಂದ ಸಿಎಸ್ಐ ರಸ್ತೆ ಟ್ಯಾಂಕ್‌ಗೆ ನೀರು ಬಿಟ್ಟ ಈ ವೇಳೆ ಪೈಪ್‌ಲೈನ್‌ಗೆ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

ಎಂ.ಜಿ.ರಸ್ತೆಯಲ್ಲಿ ನೀರು ಪೋಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಅಧಿಕಾರಿಗಳು ನೀರು ಹರಿಸುವುದು ನಿಲ್ಲಿಸಿದರಾದರೂ ಸುಮಾರು 8 ಕಿ.ಮೀ ದೂರದ ಪೈಪ್‌ಲೈನ್‌ನಲ್ಲಿರುವ ನೀರು ಖಾಲಿಯಾಗುವವರೆಗೂ ನೀರು ಪೈಪ್‌ಲೈನ್ ಹಾನಿಯಾದ ಸ್ಥಳದಲ್ಲಿ ಹರಿಯುತ್ತಲೇ ಇತ್ತು.

ADVERTISEMENT

ಬಳಿಕ ಕಾಮಗಾರಿ ಸ್ಥಳದಲ್ಲಿ ತೆಗೆದ ದೊಡ್ಡ ಗುಂಡಿಯಲ್ಲಿ ಸಂಗ್ರಹವಾದ ನೀರನ್ನು ಪಂಪ್‌ಸೆಟ್‌ ಬಳಸಿ ಪಕ್ಕದ ಉದ್ಯಾನಕ್ಕೆ ಹರಿಸುವ ಪ್ರಯತ್ನ ಮಾಡಲಾಯಿತು. ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗಿ ಹರಿಯುವುದು ನೋಡಿ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದರು.

ತಿಂಗಳ ಹಿಂದಷ್ಟೇ ಎಂ.ಜಿ.ರಸ್ತೆಯಲ್ಲಿಯೇ ಮರುಳಸಿದ್ದೇಶ್ವರ ದೇವಾಲಯದ ವೃತ್ತದಲ್ಲಿ ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಪೈಪ್‌ ಅಳವಡಿಸುವ ಕಾಮಗಾರಿ ಸಂದರ್ಭದಲ್ಲಿ ಕೂಡ ಜಕ್ಕಲಮಡಗು ಜಲಾಶಯದ ಕುಡಿಯುವ ನೀರು ಪೂರೈಕೆ ಮಾರ್ಗಕ್ಕೆ ಧಕ್ಕೆ ಮಾಡಿ ಲಕ್ಷಾಂತರ ಲೀಟರ್ ಪೋಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.