ADVERTISEMENT

ವಿಧವಾ ವಿವಾಹ ಪ್ರೋತ್ಸಾಹ ಹಣ ಗುಳುಂ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಸಮಾಜಕಲ್ಯಾಣ ಇಲಾಖೆ ಸಿಬ್ಬಂದಿ ಶಾಮೀಲು ಶಂಕೆ

ಎಂ.ರಾಮಕೃಷ್ಣಪ್ಪ
Published 30 ಸೆಪ್ಟೆಂಬರ್ 2022, 2:55 IST
Last Updated 30 ಸೆಪ್ಟೆಂಬರ್ 2022, 2:55 IST

ಚಿಂತಾಮಣಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಕ್ಕೆ ದೊರೆಯುವ ವಿಧವಾ ವಿವಾಹ, ಅಂತರ್ಜಾತಿ ವಿವಾಹ ಸೇರಿದಂತೆ ಮತ್ತಿತರ ಯೋಜನೆಗಳ ಧನಸಹಾಯ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲಗಳು ಹುಟ್ಟಿಕೊಂಡಿವೆ.

ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭಿವೃದ್ಧಿಗಾಗಿರುವ ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ದೋಚಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಉಪನೋಂದಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯೂ ಈ ಜಾಲದಲ್ಲಿ ಶಾಮೀಲಾಗಿರುವ ಸಂಶಯ ವ್ಯಕ್ತವಾಗಿದೆ.

ವ್ಯಕ್ತಿಯೊಬ್ಬರ ನಂಬಿಕೆ ಗಳಿಸಿ ಹಸು ಸಾಲ ಕೊಡಿಸುವ ನೆಪದಲ್ಲಿ ದಾಖಲೆಗಳನ್ನು ಪಡೆದು ವಂಚಿಸಲಾಗಿದೆ. ಅದೇ ರೀತಿ ಮಹಿಳೆಯೊಬ್ಬರ ಫೋಟೊದುರ್ಬಳಕೆ ಮಾಡಿಕೊಂಡು ವಿಧವಾ ವಿವಾಹದ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆಕೆಗೆ ಸರ್ಕಾರದಿಂದ ಬಂದ ಪ್ರೋತ್ಸಾಹ ಹಣ ಗುಳುಂ ಮಾಡಿದ ಪ್ರಕರಣ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ADVERTISEMENT

ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಗೂರು ಗ್ರಾಮದ ಪರಿಶಿಷ್ಟ ಜಾತಿಯ ನರಸಿಂಹಮೂರ್ತಿ ಇಂತಹ ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾರೆ. ಇವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ವಿವಾಹವಾಗಿ ಏಳು ವರ್ಷಗಳಾಗಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ದೊಡ್ಡ ಗಂಜೂರು ಗ್ರಾಮದ ದೂರದ ಸಂಬಂಧಿಕ ನಾರಾಯಣಸ್ವಾಮಿ ಆಗಾಗ ಅವರ ಮನೆಗೆ ಬಂದು ಹೋಗುತ್ತಿದ್ದರು.

ಆಗಸ್ಟ್ 21ರಂದು ನಾರಾಯಣಸ್ವಾಮಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಉನಿಕಿಲಿ ಗ್ರಾಮದ ಎಂ.ರವಿಕುಮಾರ್ ಎಂಬುವರುಎಷ್ಟು ದಿನ ಕೂಲಿ ಮಾಡುತ್ತಿಯಾ? ತಾಲ್ಲೂಕು ಕಚೇರಿಯಲ್ಲಿ ಹಸು ಸಾಲ ಕೊಡಿಸುವುದಾಗಿ ನರಸಿಂಹ ಮೂರ್ತಿ ಅವರಿಂದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಎಸ್ಸೆಸ್ಸೆಲಿ ಅಂಕಪಟ್ಟಿ ನಕಲು ಪ್ರತಿ ತೆಗೆದುಕೊಂಡು ಹೋಗಿದ್ದರು.

ಆಗಸ್ಟ್ 24 ರಂದು ಎರಡು ಪಾಸ್‌ಪೋರ್ಟ್ ಭಾವಚಿತ್ರ ಪಡೆದು ತಾಲ್ಲೂಕು ಕಚೇರಿಗೆ ಬರಲು ಸೂಚಿಸಿದ್ದಾರೆ. ನರಸಿಂಹಮೂರ್ತಿ ತಾಲ್ಲೂಕು ಕಚೇರಿ ಬಳಿ ಹೋದಾಗ ನಾರಾಯಣಸ್ವಾಮಿ ಮತ್ತು ರವಿಕುಮಾರ್ ಅಪರಿಚಿತ ಮಹಿಳೆಯನ್ನು ನರಸಿಂಹ ಮೂರ್ತಿ ಜತೆ ನಿಲ್ಲಿಸಿಫೋಟೊ ತೆಗೆಸಿ, ಕೆಳಗೆ ಇಬ್ಬರ ಸಹಿಯನ್ನೂ ಪಡೆದಿದ್ದಾರೆ. ಮಹಿಳೆ ನಿನ್ನ ಸಾಲಕ್ಕೆ ಜಾಮೀನು ಕೊಡುತ್ತಾಳೆ ಎಂದು ನಂಬಿಸಿದ್ದಾರೆ.10ದಿನಗಳಲ್ಲಿ ಹಸು ಸಾಲ ಮಂಜೂರಾಗುತ್ತದೆ ಎಂದು ಹೇಳಿ ಕಳುಹಿಸಿದ್ದಾರೆ.

ನರಸಿಂಹಮೂರ್ತಿ ಸುಮಾರು ದಿನ ಕಾದರೂ ಸಾಲದ ಬಗ್ಗೆ ಮಾಹಿತಿ ದೊರೆಯಲಿಲ್ಲ. ಸೆಪ್ಟೆಂಬರ್ 16ರಂದು ನಾರಾಯಣಸ್ವಾಮಿ ಮತ್ತು ರವಿಕುಮಾರ್ ಅವರನ್ನು ಭೇಟಿ ಮಾಡಿ ಸಾಲದ ಕುರಿತು ವಿಚಾರಿಸಿದರು.

ಸಾಲದ ಕಡತ ಅಂತಿಮ ಹಂತದಲ್ಲಿದೆ ಎಂದು ನಂಬಿಸಿದ್ದಾರೆ.ಮೊದಲು ತಾಲ್ಲೂಕು ಕಚೇರಿ, ನಂತರ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎಂದು ಹೇಳಿದ್ದು, ಅನುಮಾನ ಮೂಡಿಸಿದೆ. ನರಸಿಂಹಮೂರ್ತಿ ಆತನ ಬಾವಮೈದನನ್ನು ಕರೆದುಕೊಂಡು ಹೋಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಿ ಮಾಡಲು ದಾಖಲೆಗಳನ್ನು ನೋಡಿದಾಗ ಕೃತ್ಯ ಬಹಿರಂಗವಾಗಿದೆ.

ನಾರಾಯಣಸ್ವಾಮಿ ಮತ್ತು ರವಿಕುಮಾರ್ ಸರ್ಕಾರದಿಂದ ಬರುವ ವಿಧವಾ ವಿವಾಹ ಪ್ರೋತ್ಸಾಹ ಹಣಕ್ಕಾಗಿ ದಾಖಲೆಗಳನ್ನು ಪಡೆದು, ಭಾವಚಿತ್ರ ತೆಗೆಸಿ, ಸಹಿ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ವಿಧವಾ ವಿವಾಹ ದಾಖಲೆಗಳಿಗೆ ಸಾಕ್ಷಿದಾರರಾಗಿ ದ್ಯಾವಮ್ಮ ಮತ್ತು ನಾಗೇಶ ಎಂಬುವರು ಸಹಿ ಮಾಡಿದ್ದಾರೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ನರಸಿಂಹಮೂರ್ತಿ ಹೋಗದೆ ವಿವಾಹ ನೋಂದಣಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.