ADVERTISEMENT

ಕುಲುಮೆಗೆ ಸೌರ ಶಕ್ತಿ ಯಂತ್ರದ ಗಾಳಿ!

ಕಮ್ಮಾರನಿಗೆ ಕೂಲಿ ಆಳಿನ ಅವಲಂಬನೆ ತಪ್ಪಿಸಲು ಹೊಸ ಯಂತ್ರ ಆವಿಷ್ಕರಿಸಿದ ಸೆಲ್ಕೊ ಸಂಸ್ಥೆ, ತಾಲ್ಲೂಕಿನ ರಾಯಪ್ಪನಹಳ್ಳಿಯಲ್ಲಿ ಮೊದಲ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 14:25 IST
Last Updated 7 ಜುಲೈ 2018, 14:25 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಯಪ್ಪನಹಳ್ಳಿಯಲ್ಲಿ ಸೌರ ವಿದ್ಯುತ್ ಚಾಲಿತ ಕುಲುಮೆಗೆ ಗಾಳಿ ಊದುವ ಯಂತ್ರ ಬಳಸುತ್ತಿರುವ ಕಮ್ಮಾರ ಸುಬ್ಬಾಚಾರಿ.
ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಯಪ್ಪನಹಳ್ಳಿಯಲ್ಲಿ ಸೌರ ವಿದ್ಯುತ್ ಚಾಲಿತ ಕುಲುಮೆಗೆ ಗಾಳಿ ಊದುವ ಯಂತ್ರ ಬಳಸುತ್ತಿರುವ ಕಮ್ಮಾರ ಸುಬ್ಬಾಚಾರಿ.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ರಾಯಪ್ಪನಹಳ್ಳಿಯ ಕಮ್ಮಾರ ಸುಬ್ಬಾಚಾರಿ ಅವರ ಮನೆಯಲ್ಲಿ ಅಳವಡಿಸಿರುವ ಸೆಲ್ಕೊ ಸಂಸ್ಥೆ ಆವಿಷ್ಕರಿಸಿ, ವಿನ್ಯಾಸಗೊಳಿಸಿರುವ ಸೌರ ವಿದ್ಯುತ್ ಚಾಲಿತ ಕುಲುಮೆಗೆ ಗಾಳಿ ಊದುವ ಯಂತ್ರವನ್ನು ಶನಿವಾರ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೆಲ್ಕೊ ಫೌಂಡೇಷನ್‌ನ ಕಾರ್ಯಾಚರಣೆ ವಿಭಾಗದ ಕಾರ್ಯಕ್ರಮ ವ್ಯವಸ್ಥಾಪಕ ರೋಶನ್, ‘ಸೆಲ್ಕೊ ಸಂಸ್ಥೆ ಸೌರ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ, ಝೆರಾಕ್ಸ್ ಯಂತ್ರ, ಹಾಲು ಕರೆಯುವ ಯಂತ್ರ, ರೋಟಿ ಮಾಡುವ ಯಂತ್ರ, ಕುಲುಮೆಗೆ ಗಾಳಿ ಉದುವ ಯಂತ್ರ ಸೇರಿದಂತೆ ಅನೇಕ ಬಗೆಯ ಸಾಧನಗಳನ್ನು ಆವಿಷ್ಕರಿಸಿ ದೇಶ, ವಿದೇಶಗಳಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಜನಸಾಮಾನ್ಯರಿಗೆ ಹೊಸ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ವಿವಿಧ ದೇಶಗಳ ಬಡ ಜನರಿಗೆ ಸಹ ಈ ಮೂಲಕ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ಜನರು ಈ ಇಂತಹ ಸಾಧನಗಳ ಖರೀದಿಸಲು ಶೇ10 ರಷ್ಟು ಮೊತ್ತ ಭರಿಸಿದರೆ ಸಾಕು, ಉಳಿದ ಶೇ90ರಷ್ಟು ಹಣವನ್ನು ಬ್ಯಾಂಕ್ ಸಾಲ ನೀಡುತ್ತದೆ. ಕಡು ಬಡವರು ಶೇ 2 ರಷ್ಟನ್ನಾದರೂ ಭರಿಸಿದರೆ ಉಳಿದ ಮೊತ್ತಕ್ಕೆ ಸೆಲ್ಕೊ ಪೌಂಢೇಷನ್ ಸಹಾಯ ಮಾಡುತ್ತದೆ. ತಿಂಗಳು ಕಂತಿನಲ್ಲಿ ಸಾಲ ಮರುಪಾವತಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಸೆಲ್ಕೊ ಫೌಂಡೇಷನ್‌ ಸಲಹೆಗಾರ ಸುರೇಂದ್ರ ಹೆಗಡೆ ಮಾತನಾಡಿ, ‘ರಾಯಪ್ಪನಹಳ್ಳಿಯಲ್ಲಿ ಈ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೌರ ವಿದ್ಯುತ್ ಚಾಲಿತ ಕುಲುಮೆಗೆ ಗಾಳಿ ಊದುವ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದೆವು. ಇದರಿಂದ ಸುಬ್ಬಾಚಾರಿ ಅವರಿಗೆ ಸಾಕಷ್ಟು ಅನುಕೂಲವಾಗಿರುವುದು ಕಂಡುಬಂದಿದೆ. ಈ ಯಂತ್ರದಿಂದ ವಿದ್ಯುತ್ ಬಿಲ್, ಕಾರ್ಮಿಕರ ಸಂಬಳ, ದೈಹಿಕ ಶ್ರಮ ಕಡಿಮೆಯಾಗಿದೆ. ಜತೆಗೆ ನಿರಂತರ ಕೆಲಸ ಮಾಡಬಹುದಾಗಿದೆ’ ಎಂದರು.

‘ಕಮ್ಮಾರರಿಗೆ ಇನ್ನೂ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಸೌರ ವಿದ್ಯುತ್ ಚಾಲಿತ ಸುತ್ತಿಗೆ ರೂಪಿಸುವ ಪ್ರಯೋಗ ನಡೆದಿದೆ. ದೇಶದಲ್ಲಿ ಒಡಿಶಾ, ಈಶಾನ್ಯ ಭಾರತದಲ್ಲಿ ಸೌರ ಚಾಲಿತ ವಸ್ತುಗಳ ಅಗತ್ಯ ತುಂಬಾ ಇದೆ. ರಾಜ್ಯದಲ್ಲಿ ಕಂಪೆನಿಯ 60 ಶಾಖೆಗಳಿವೆ. ದೊಡ್ಡ ಆದಾಯ ಗಳಿಸುವ ಉದ್ದೇಶ ನಮಗಿಲ್ಲ. ನೌಕರರ ಸಂಬಳ ನೀಡುವಷ್ಟು ಲಾಭಾಂಶವಿಟ್ಟುಕೊಂಡು ಬಡಜನರಿಗಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಜಿ.ಕೃಷ್ಣ ಹೇರಳೆ ಮಾತನಾಡಿ, ‘ಸೆಲ್ಕೊ ಕಂಪೆನಿ ಮತ್ತು ನಮ್ಮ ಬಾಂಧವ್ಯ ಬಹಳ ಹಳೆಯದು. ಅವರ ಹೊಸ ಹೊಸ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಹಾಯ ಮಾಡುವ ಮೂಲಕ ನಾವು ಅವರ ಜತೆಗೆ ಕೆಲಸ ಮಾಡುತ್ತಿದ್ದೇವೆ. ಇಂತಹ ಸಾಧನಗಳನ್ನು ಖರೀದಿಸಲು ಸಿದ್ಧವಿರುವವರಿಗೆ ನಮ್ಮ ಬ್ಯಾಂಕ್ ಶಾಖೆಗಳ ಮೂಲಕ ಸಾಲ ನೀಡುತ್ತೇವೆ’ ಎಂದು ತಿಳಿಸಿದರು.

ಸೆಲ್ಕೊ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಹೆಗಡೆ ಮಾತನಾಡಿ, ‘ಸೌರಶಕ್ತಿಯನ್ನು ದೀಪ ಉರಿಸಲು ಮತ್ತು ನೀರು ಕಾಯಿಸಲು ಮಾತ್ರ ಬಳಕೆ ಮಾಡಬಹುದು ಎಂಬ ಕಲ್ಪನೆ ಇತ್ತು. ಅದರಾಚೆ ಜೀವನಾಧಾರಿತವಾದ ಯಂತ್ರಗಳನ್ನು ನಡೆಸಬಹುದು ಎಂದು ಸೆಲ್ಕೊ ಸಂಸ್ಥೆ ತೋರಿಸಿಕೊಟ್ಟಿದೆ. ಸಂಸ್ಥೆ ಸಂಸ್ಥಾಪಕರಾದ ಹರೀಶ್ ಹಂದೆ ಅವರಿಗೆ ಸೌರಶಕ್ತಿಯಿಂದ ಬಡತನ ನಿವಾರಣೆ ಮಾಡುವುದೇ ಮೊದಲ ಧ್ಯೇಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.