ADVERTISEMENT

ಗೌರಿಬಿದನೂರಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 3:09 IST
Last Updated 20 ಮಾರ್ಚ್ 2022, 3:09 IST
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗಣ್ಯರು
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗಣ್ಯರು   

ಗೌರಿಬಿದನೂರು: ‘ಗ್ರಾಹಕರು ತಮಗೆ ಬೇಕಾದ ದಿನನಿತ್ಯದ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸಬೇಕಿದೆ. ಯಾವುದೇ ರೀತಿಯಲ್ಲಿ ಅವರ ಹಕ್ಕುಗಳಿಗೆ ಚ್ಯುತಿ ಆಗಬಾರದು’ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶಡಿ.ಕೆ. ಮಂಜುನಾಥಚಾರಿ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮನುಷ್ಯನಿಗೆ ದಿನನಿತ್ಯದ ಬಳಕೆ ವಸ್ತುಗಳು ಅವಶ್ಯಕವಾಗಿದ್ದು, ತಾನು ನೀಡಿದ ಹಣಕ್ಕೆ ಗುಣಮಟ್ಟದಿಂದ ಕೂಡಿದ ವಸ್ತುಗಳನ್ನು ಕೇಳುವ ಹಕ್ಕು ಅವರಿಗಿದೆ. ಗ್ರಾಹಕರು ತೆಗೆದುಕೊಳ್ಳುವ ಪ್ರತಿ ವಸ್ತುವಿಗೆ ರಸೀದಿ ಪಡೆದಾಗ ಮಾತ್ರ ಅವರು ವಂಚನೆಯಿಂದ ಮೋಸ ಹೋಗಲು ಆಗುವುದಿಲ್ಲ ಎಂದರು.

ADVERTISEMENT

ರಸೀದಿ ಇದ್ದರೆ ಗ್ರಾಹಕರ ವೇದಿಕೆಗೆ ಹೋಗಲು ಸಾಧ್ಯವಾಗುತ್ತದೆ. ಸುಳ್ಳು ಜಾಹೀರಾತು ನೀಡಿ ನಕಲಿ ಸಾಮಗ್ರಿ ನೀಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ಗ್ರಾಹಕರ ವೇದಿಕೆ ಇದೆ ಎಂದು ತಿಳಿಸಿದರು.

ಸರ್ಕಾರಿ ಅಭಿಯೋಜಕ ಆದಿನಾರಾಯಣಸ್ವಾಮಿ ಮಾತನಾಡಿ, ನಿತ್ಯದ ವ್ಯಾಪಾರ ವಹಿವಾಟುಗಳಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು
ತಿಳಿಸಿದರು.

ನಕಲಿ ವಸ್ತುಗಳಿಗೆ ಕಡಿವಾಣ ಹಾಕಬೇಕು. ಗ್ರಾಹಕರಿಗೆ ಅನುಕೂಲಕ್ಕಾಗಿ ಗ್ರಾಹಕರ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಅದು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿದ್ದು ಗ್ರಾಹಕರು ತಮ್ಮಲ್ಲಿ ಸಮಗ್ರ ಮಾಹಿತಿ ಇದ್ದರೆ ವಕೀಲರ ನೇಮಕ ಇಲ್ಲದೆ ತಾವೇ ವಾದ ಮಾಡಿಕೊಳ್ಳುವ ಅವಕಾಶವಿದೆ. ತಾವು ಕೊಳ್ಳುವ ವಸ್ತುಗಳಿಗೆ ಕಡ್ಡಾಯವಾಗಿ ರಸೀದಿ ಪಡೆದಾಗ ಮಾತ್ರ ಅವರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಆಶಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ವಕೀಲರ ಸಂಘದ ಅಧ್ಯಕ್ಷ ಡಿ. ರಾಮದಾಸ್, ಕಾರ್ಯದರ್ಶಿ ದಯಾನಂದ, ವಿ.ಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.