ADVERTISEMENT

ಕೈವಾರದಲ್ಲಿ ಮಾಲಾಧಾರಿಗಳ ಆರಾಧನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:10 IST
Last Updated 15 ಜನವರಿ 2021, 4:10 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಸಂಕ್ರಾಂತಿಯ ಪ್ರಯುಕ್ತ ಭಕ್ತರ ದಂಡು
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಸಂಕ್ರಾಂತಿಯ ಪ್ರಯುಕ್ತ ಭಕ್ತರ ದಂಡು   

ಚಿಂತಾಮಣಿ: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಕೈವಾರದಲ್ಲಿ ಗುರುವಾರ ಮಕರ ಸಂಕ್ರಾಂತಿ ಪ್ರಯುಕ್ತ ಯೋಗಿನಾರೇಯಣ ಮಠ, ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಂಕ್ರಾಂತಿಯ ಸಂದರ್ಭದಲ್ಲಿ ಯೋಗಿನಾರೇಯಣ ಯತೀಂದ್ರರಿಗೆ ಮಾಲೆಯನ್ನು ಹಾಕುವ ಸಂಪ್ರದಾಯವಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ಮಾಲಾಧಾರಿಗಳು ಸಾಮೂಹಿಕವಾಗಿ ಮಠಕ್ಕೆ ಆಗಮಿಸಿ ತಾತಯ್ಯನವರ ಸೇವೆಯಲ್ಲಿ ಪಾಲ್ಗೊಂಡಿದ್ದರು.

ತಾತಯ್ಯನವರ ಮಠದಲ್ಲಿ ದೇವಾಲಯದ ಪ್ರಾಕಾರೋತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು. ತಾತಯ್ಯನವರ ಬೃಂದಾವನದಲ್ಲಿ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಉತ್ಸವಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಂಗಳ
ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚಕ ವೃಂದದವರು ಮತ್ತೊಮ್ಮೆ ಪೂಜೆ ನೆರವೇರಿಸಿ ಉತ್ಸವವನ್ನು ನಡೆಸಲಾಯಿತು. ಭಕ್ತರು ತಾತಯ್ಯನವರ ದರ್ಶನ ಪಡೆದು ಪುನೀತರಾದರು. ಮಾಲಾಧಾರಿಗಳು ಮಠದ ಆವರಣದಲ್ಲಿ ಸಂಕೀರ್ತನಾ ಭಜನೆಯನ್ನು ಮಾಡಿದರು. ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಮಠದ ಗೋಶಾಲೆಯಲ್ಲಿ ಸಂಕ್ರಾಂತಿ ಪ್ರಯುಕ್ತ ಗೋಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.ಗೋವುಗಳನ್ನು ಸ್ವಚ್ಛಗೊಳಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಹರಿಶಿನ ಕುಂಕುಮ, ಗಂಧವನ್ನು ಸಮರ್ಪಿಸಿ, ಅಷ್ಟೋತ್ತರ ಸೇವೆ ನೆರವೇರಿಸಿ ಮಂಗಳ ನಿರಾಜನವನ್ನು ಸಮರ್ಪಿಸಲಾಯಿತು. ಗ್ರಾಮದ ಜನರು ತಮ್ಮ ರಾಸುಗಳನ್ನು ಸಿಂಗರಿಸಿ ಮಠಕ್ಕೆ ಕರೆತಂದು ಪೂಜೆ ಸಲ್ಲಿಸಿದರು.

ಯತೀಂದ್ರರ ಮಾಲಾಧಾರಿಗಳಾಗಿದ್ದ ಭಕ್ತರು ಕೈವಾರದ ಪ್ರಮುಖ ರಸ್ತೆಗಳಲ್ಲಿ ಸಂಕೀರ್ತನೆಯೊಂದಿಗೆ ಭಜನೆಯಲ್ಲಿ ಪಾಲ್ಗೊಂಡರು. ಎಲ್ಲ ಭಕ್ತರಿಗೆ ಮಠದಲ್ಲಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಕ್ಕಿದಾನ: ಆನೇಕಲ್ ತಾಲ್ಲೂಕಿನ ಚಿಕ್ಕತಿಮ್ಮಸಂದ್ರ ಗ್ರಾಮದ ಭಕ್ತರು ಯೋಗಿನಾರೇಯಣ ಮಠದಲ್ಲಿ ಪ್ರತಿನಿತ್ಯ ನಡೆಯುವ ಉಚಿತ ಅನ್ನದಾನಕ್ಕಾಗಿ 50 ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.