ಚಿಂತಾಮಣಿ: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಕೈವಾರದಲ್ಲಿ ಯೋಗಿನಾರೇಯಣ ಯತೀಂದ್ರರು 1726ರಲ್ಲಿ ಜನಿಸಿ ಚಿಕ್ಕ ವಯಸ್ಸಿನಲ್ಲಿಯೇ ಭಜನೆ, ಕೀರ್ತನೆ, ಸಾಧು ಸತ್ಪುರುಷರ ಸೇವೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಜೀವನದಲ್ಲಿ ಸದಾ ಅಂತರ್ಮುಖಿಯಾಗಿರುತ್ತಿದ್ದ ನಾರಾಯಣಪ್ಪ ಒಮ್ಮೆ ತಮ್ಮ ಕುಲಕಸುಬಾದ ಬಳೆ ವ್ಯಾಪಾರಕ್ಕೆ ಹೋಗಿದ್ದಾಗ ಮಳೆ ಬಂದಿದ್ದರಿಂದ ಕಾಡಿನ ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿದ್ದ ತಪಸ್ವಿಗಳು ಅವರಿಗೆ ಅಷ್ಟಾಕ್ಷರಿ ಮಂತ್ರ ಉಪದೇಶಿಸಿದರು ಎನ್ನುವುದು ಐಹಿತ್ಯ.
ನಾರಾಯಣಪ್ಪ ತಪಸ್ಸು ಮಾಡಿ ಸಿದ್ಧಿ ಪಡೆದ ಮೇಲೆ ಯೋಗಿನಾರೇಯಣ ಯತೀಂದ್ರರಾದರು. 110 ವರ್ಷಗಳ ಸಾಧನೆ ಜೀವನ ನಡೆಸಿ 1836ರಲ್ಲಿ ಸಜೀವ ಬೃಂದಾವನಸ್ಥರಾದರು ಎಂದು ಕ್ಷೇತ್ರದ ಇತಿಹಾಸ ಹೇಳುತ್ತದೆ.
ಯತೀಂದ್ರರ ಗುರುಪೂಜೆ ಮತ್ತು ಸಂಗೀತೋತ್ಸವವನ್ನು ಯೋಗಿ ನಾರೇಯಣ ಟ್ರಸ್ಟ್ ವತಿಯಿಂದ ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಜುಲೈ 8ರಂದು ಧರ್ಮಾಧಿಕಾರಿ ಎಂ.ಆರ್.ಜಯರಾಂ ನೇತೃತ್ವದ ತಂಡ ತಾತಯ್ಯನವರ ಕೀರ್ತನೆ ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೇಶದ ನಾನಾ ಭಾಗಗಳಿಂದ ಆಗಮಿಸುವ ಸಂಗೀತ ವಿದ್ವಾಂಸರಿಗೆ ಸ್ವಾಗತ ಕೋರಲು ಕೈವಾರ ಸಜ್ಜಾಗಿದೆ.
ತಮಿಳುನಾಡಿನ ತಿರುವಯ್ಯಾರ್ ಹೊರತುಪಡಿಸಿದರೆ ರಾಜ್ಯ ಹಾಗೂ ದೇಶದ ಯಾವ ಭಾಗದಲ್ಲೂ 72 ಗಂಟೆಗಳ ಕಾಲ ನಿರಂತರವಾಗಿ ಸಂಗೀತೋತ್ಸವ ನಡೆದ ಉದಾಹರಣೆ ಇಲ್ಲ. ಈ ರೀತಿ ಸಂಗೀತೋತ್ಸವ ನಡೆಸುವ ರಾಜ್ಯದ ಏಕೈಕ ಕ್ಷೇತ್ರ ಕೈವಾರ. ರಾಷ್ಟ್ರಮಟ್ಟದ ಖ್ಯಾತ ಸಂಗೀತ ವಿದ್ವಾಂಸರು ಕಲಾ ಸೇವೆ ನೀಡಲಿದ್ದಾರೆ. ತಿರುವಯ್ಯಾವರ್ ಶಾಸ್ತ್ರೀಯ ಸಂಗೀತ ಕೇಂದ್ರವಾದರೆ ಕೈವಾರ ಶಾಸ್ತ್ರೀಯ ಸಂಗೀತದ ಜತೆಗೆ ಆಧ್ಯಾತ್ಮಿಕ ಕೇಂದ್ರವಾಗಿದೆ.
ಸಂಗೀತೋತ್ಸವ ನಡೆಯುವ ಸಭಾಂಗಣದಲ್ಲಿ ಸರ್ವಾಲಂಕೃತವಾದ ಎರಡು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದೆ. ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ. ವೇದಿಕೆ ಎದುರುಗಡೆ ಬದಿಯಲ್ಲಿ ಮತ್ತೊಂದು ವೇದಿಕೆ ನಿರ್ಮಿಸಿ ಯೋಗಿನಾರೇಯಣ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕೈವಾರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಯೋಗಿನಾರೇಯಣ ಮಠ ಹಾಗೂ ಮುಖ್ಯ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೈವಾರ ನವ ವಧುವಿನಂತೆ ಅಲಂಕೃತಗೊಂಡಿದೆ.
ಸಭಾಂಗಣದಲ್ಲಿ 3 ಸಾವಿರ ಜನ ಹಾಗೂ ಹೊರಗಡೆ ನಿರ್ಮಿಸಿರುವ ವಾಟರ್ ಪ್ರೂಪ್ ಬೃಹತ್ ಪೆಂಡಾಲ್ ಗಳಲ್ಲಿ 25 ಸಾವಿರ ಜನರು ಕುಳಿತುಕೊಳ್ಳಬಹುದು. ನಿತ್ಯ ಸುಮಾರು 1ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಆಗಮಿಸುವ ಸಂಗೀತಗಾರರಿಗೆ, ಭಕ್ತರಿಗೆ ಮೂರು ದಿನ ಉಚಿತ ಅನ್ನದಾಸೋಹ ನಡೆಯಲಿದೆ.
ಊಟಕ್ಕಾಗಿ ತರಕಾರಿ ಫಲಾವ್, ಅನ್ನ ಸಾಂಬಾರ್, ಪುಳಿಯೊಗರೆ, ಮೊಸರನ್ನ, ಸಿಹಿಪೊಂಗಲ್ ವಿತರಿಸಲಾಗುವುದು ಎಂದು ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ತಿಳಿಸಿದರು.
ಸಂಗೀತೋತ್ಸವದಲ್ಲಿ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ನೂರಾರು ಕಲಾತಂಡಗಳು ಭಾಗವಹಿಸಲಿದೆ. ಹಗಲು ರಾತ್ರಿ ತದೇಕಚಿತ್ತರಾಗಿ ಕೀರ್ತನೆ, ತತ್ವಪದಗಳ ಗಾಯನ ನಡೆಯಲಿದೆ. ಮೂರನೇ ದಿನ ಗುರುವಾರ ವಿಜೃಂಭಣೆಯಿಂದ ಗುರುಪೂಜೆ ನೆರವೇರುತ್ತದೆ.
ಕಲಾರಾಧನೆ ಮೂಲಕ ಭಕ್ತಿ ಅರ್ಪಣೆ
ಆಷಾಡಮಾಸದ ಹುಣ್ಣಿಮೆ ಗುರು ಸ್ಮರಿಸುವ ದಿನ. ಯೋಗಿನಾರೇಯಣ ಯತೀಂದ್ರರರು ತಮ್ಮ ಕೀರ್ತನೆ ಮೂಲಕ ಗುರುಗಳ ಮಹತ್ವ ಹಾಡಿ ಹೊಗಳಿದ್ದಾರೆ. ಗುರುಪರಂಪರೆ ಉಳಿಸಿ ಆರಾಧಿಸುವ ಜತೆಗೆ ಗುರುಗಳಿಗೆ ಕಲಾರಾಧನೆ ಮೂಲಕ ಭಕ್ತಿ ಸಮರ್ಪಿಸುವ ಸಲುವಾಗಿ ಗುರು ಪೂಜಾ ಸಂಗೀತೋತ್ಸವ ಮಠ ಪ್ರತಿವರ್ಷ ಹಮ್ಮಿಕೊಂಡು ಬರುತ್ತಿದೆ ಎಂ.ಆರ್.ಜಯರಾಂ ಧರ್ಮಾಧಿಕಾರಿ ಒಂದೇ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಸಂಗೀತ ವಿದ್ವಾಂಸರನ್ನು ಮತ್ತು ಸಂಗೀತದ ನಾನಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಕೇಳುವ ಸೌಭಾಗ್ಯವನ್ನು ಮಠ ಅನುವು ಮಾಡಿಕೊಟ್ಟಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಅವರ ಪ್ರತಿಭೆ ಗುರುತಿಸುವ ಕೆಲಸವನ್ನು ಮಠವು ಮಾಡಿಕೊಂಡು ಬರುತ್ತಿದೆ. ಬಾಲಕೃಷ್ಣ ಭಾಗವತರ್ ಮಠದ ಸಂಕೀರ್ತನಾ ಯೋಜನೆ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.