ADVERTISEMENT

ಅಂತರದ ಗೆಲುವಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 8:30 IST
Last Updated 23 ಫೆಬ್ರುವರಿ 2012, 8:30 IST

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದು, ಲೋಕಸಭೆಯ ಉಪಚುನಾವಣೆಯಲ್ಲಿ ಅತಿ ಹೆಚ್ಚು ಅಂತರದ ಗೆಲುವಿಗೆ ಅವಕಾಶವಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿಗಳು ಸೇರಿದಂತೆ ಬಹುತೇಕ ಎಲ್ಲ ಸ್ಥಳೀಯ ಸಂಸ್ಥೆಗಳ ಆಡಳಿತ ಪಕ್ಷದ ಹಿಡಿತದಲ್ಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರನ್ನು ಸ್ಥಳೀಯ ಸಂಸ್ಥೆಗಳಿಗೆ ಜನರು ಆಯ್ಕೆ ಮಾಡಿದ್ದಾರೆ. ಮೂರುವರೆ ವರ್ಷಗಳಲ್ಲಿ ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಅಭ್ಯರ್ಥಿ ಗೆಲುವಿಗೆ ನೆರವಾಗಲಿವೆ. ಅಭ್ಯರ್ಥಿ ಸುನಿಲ್‌ಕುಮಾರ್ ಜಯ ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ಹಗರಣಗಳು, ಪಕ್ಷದೊಳಗಿನ ಗೊಂದಲಗಳು ಈ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎಂದು ಪ್ರಶ್ನಿಸಿದಾಗ, ಖಂಡಿತಾ ಬೀರುತ್ತವೆ, ಆದರೆ ಅದು ನಮ್ಮ ಗೆಲುವಿಗೆ ಪೂರಕವಾಗಿ, ನಾವು ಗೆದ್ದೇ ಗೆಲ್ಲುತ್ತೇವೆ. ಯಾವ ಪಕ್ಷಗಳ ಮೇಲೆ ಆರೋಪ ಇಲ್ಲ ಹೇಳಿ? ನಾವು ಅವುಗಳಿಂದ ಮುಜುಗರಪಡುವುದಿಲ್ಲ. ರಾಜಕಾರಣವೆಂದ ಮೇಲೆ ಆರೋಪಗಳು ಬರುವುದು ಸಹಜ. ನಮ್ಮ ಪಕ್ಷದವರ ಮೇಲೂ ಆಪಾದನೆಗಳಿವೆ. ಈ ಎಲ್ಲ ಆರೋಪಗಳಿಂದ ಮುಕ್ತವಾಗಿ ಹೊರಬರುವ ವಿಶ್ವಾಸವಿದೆ ಎಂದು ಹೇಳಿದರು.

ಹಿರಿಯರು ಮಾಡಿದ ತಪಸ್ಸಿನ ಫಲದಿಂದ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿದಿದೆ. ನಮ್ಮ ಪಕ್ಷ ಎಂದಿಗೂ ಛಿದ್ರವಾಗಿಲ್ಲ. ಪಕ್ಷದೊಳಗಿರುವ ಸಣ್ಣಪುಟ್ಟ ಸಮಸ್ಯೆ, ಗೊಂದಲಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಪಕ್ಷಕ್ಕೆ ಪೂರ್ಣ ಬಹುಮತ ಸಿಗದಿದ್ದಾಗ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಬೇಕಾಯಿತು. ಜತೆಗೆ ಆ ಹಂತದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಪಕ್ಷಕ್ಕೆ ಬಂದ ಶಾಸಕರಿಗೆ ಅವಕಾಶ ನೀಡಬೇಕಾಯಿತು.
 
ಹಾಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಸಿಗಬೇಕಿದ್ದ ಅವಕಾಶ ನೀಡಲಾಗಲಿಲ್ಲ. ಅನ್ಯ ಪಕ್ಷಗಳಿಂದ ಬಂದವರು ಇಂದು ನಮ್ಮ ಪಕ್ಷದ ಆಸ್ತಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಣ್ಣಪುಟ್ಟ ಗೊಂದಲಗಳು ಆಗಿವೆ. ಮುಂದಿನ ದಿನಗಳಲ್ಲಿ ಇಂತಹ ಗೊಂದಲಕ್ಕೆ ಅವಕಾಶ ಆಗದಂತೆ ಪ್ರಾಮಾಣಿಕರಿಗೆ, ನಿಷ್ಠಾವಂತರಿಗೆ ಮಾತ್ರ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದರು.

ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಶೃಂಗೇರಿ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವಂತೆ ಇತ್ತೀಚೆಗೆ ಕ್ಷೇತ್ರದ ಜನಪ್ರತಿನಿಧಿಗಳ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕೊಂಡೊಯ್ದು ಮನವಿ ಸಲ್ಲಿಸಲಾಗಿದೆ. ಹಳದಿ ಎಲೆರೋಗ ಸಮಸ್ಯೆ, ಜನರು ಗುಳೆಹೋಗಿರುವ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯವನ್ನು ಸಾಲ ಪಾವತಿಸಿದ ಎಲ್ಲ ರೈತರಿಗೂ ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಶೃಂಗೇರಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕರಾದ ಡಾ.ವೈ.ಸಿ.ವಿಶ್ವನಾಥ್, ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ವಕ್ತಾರ ಬಿ.ರಾಜಪ್ಪ, ಮುಖಂಡ ವರಸಿದ್ದಿ ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.