ADVERTISEMENT

ಅಂಬೇಡ್ಕರ್‌ ಪರಿನಿರ್ವಾಣ: ಪ್ರಗತಿಪರರ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:56 IST
Last Updated 7 ಡಿಸೆಂಬರ್ 2013, 6:56 IST

ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೆಯ ಪರಿನಿರ್ವಾಣ ದಿನದ ಅಂಗವಾಗಿ ನಗರದಲ್ಲಿ ಪ್ರಗತಿಪರ ಸಂಘಟನೆ ಮುಖಂಡರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಮೌನಮೆರವಣಿಗೆ ನಡೆಸಿದರು.

ಬೆಳಿಗ್ಗೆ ಜಿಲ್ಲಾಪಂಚಾಯಿತಿ ಆವರಣ­ದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾ­ರ್ಪಣೆ ಮಾಡಲಾಯಿತು. ಸಂಜೆ ಹಳೇ ತಾಲ್ಲೂಕು  ಕಚೇರಿ ಆವರಣದಿಂದ ಮೇಣದ­ಬತ್ತಿ ಹಿಡಿದು ಎಂ.ಜಿ.ರಸ್ತೆಯಲ್ಲಿ ಸಾಗುವ ಮೂಲಕ ಆಜಾದ್ ವೃತ್ತ ತಲುಪಿ, ಕೆಲವು ನಿಮಿಷ ಮೌನ  ಆಚರಿಸಲಾಯಿತು.

ಮೌನ ಮೆರವಣಿಗೆ ಆರಂಭದಲ್ಲಿ ಮಹಿಳೆ­ಯರು ಅಂಬೇಡ್ಕರ್ ಭಾವಚಿತ್ರ ಹಿಡಿದು ಹೆಜ್ಜೆಹಾಕಿದರೆ, ಕೊನೆಯಲ್ಲಿ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರ­ವನ್ನು ಕರೆತರಲಾಯಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಆಜಾದ್ ವೃತ್ತವನ್ನು ಬಳಸಿ, ಅಲ್ಲಿಂದ ವಿದ್ಯುತ್ ಕಂಬದ ಕೆಳಗಡೆ ಮೇಣದ ಬತ್ತಿಯನ್ನು ಇಡಲಾಯಿತು. ಮತ್ತೆ ಕೆಲವರು ಕಾರ್ಯಕ್ರಮ ಮುಗಿಯುವ ತನಕ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ನಿಂತಿದ್ದು ಕಂಡು ಬಂತು. ಕಾರ್ಯಕ್ರಮದಲ್ಲಿ ನೆಲ್ಸನ್ ಮಂಡೇಲಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ಮುಖಂಡರಾದ ಎಚ್.ಎಸ್.ಪುಟ್ಟಸ್ವಾಮಿ, ಜಗದೀಶ, ದಂಟರಮಕ್ಕಿ ಶ್ರೀನಿವಾಸ, ಯಲಗುಡಿಗೆ ಹೊನ್ನಪ್ಪ, ಕೆ.ಟಿ.ರಾಧಕೃಷ್ಣ, ಜಿ.ಕೆ.ಬಸವರಾಜ್, ಭೀಮಯ್ಯ, ದೊಡ್ಡಯ್ಯ, ಮಲ್ಲೇಶ್, ಎ.­ರಮೇಶ್ ಕುಮಾರ್, ಕೆ.ಆರ್.ಗಂಗಾಧರ, ಹಾಲಪ್ಪ, ಮಹೇಶ್, ಓಂಪ್ರಕಾಶ್, ಮಂಜಯ್ಯ, ಲಕ್ಷ್ಮಣ್, ವೆಂಕಟೇಶ್, ಸುರೇಶ್, ಲೋಕೇಶ್ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿ­ದ್ದರು. ಸಂಜೆ ಹಾಸ್ಟೆಲ್‌  ವಿದ್ಯಾರ್ಥಿಗಳ ಒಕ್ಕೂಟ­ದಿಂದ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿ­­ಗಳು ಅಂಬೇಡ್ಕರ್ ಭಾವಚಿತ್ರ­ದೊಂದಿಗೆ  ಎಐಟಿ ವೃತ್ತದಿಂದ ಜಿಲ್ಲಾ­ ಪಂಚಾ­ಯಿತಿ ಕಚೇರಿ ವರೆಗೆ  ಜಿಲ್ಲಾ ಪಂಚಾಯಿತಿ ಕಚೇರಿ ಆವರಣ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.