ADVERTISEMENT

ಅಕ್ರಮ ಗಣಿಗಾರಿಕೆ; ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 11:00 IST
Last Updated 12 ಜೂನ್ 2011, 11:00 IST

ಕಡೂರು: ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸೇವಾಪುರದ ಸುತ್ತಮುತ್ತಲಿನ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಆದೇಶದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಹಸೀಲ್ದಾರ್ ಬಿ.ಆರ್.ರೂಪ ತಿಳಿಸಿದರು.

ಕಳೆದ ತಿಂಗಳು ಗಣಿಗಾರಿಕೆ ನಡೆಯುತ್ತಿದ್ದ ಗ್ರಾಮಗಳಾದ ಸೇವಾಪುರ, ಸಿದ್ರಾಮನಹಳ್ಳಿ, ಚಿಕ್ಕತಂಗಲಿ, ಬೀರನಹಟ್ಟಿ, ವೈ.ಮಲ್ಲಾಪುರ, ಶಂಕರಪುರ ಸೇರಿದಂತೆ ಹಲವಾರು ಹಳ್ಳಿಗಳ ಗ್ರಾಮಸ್ಥರು ಗಣಿಗಾರಿಕೆಯಿಂದ ನೂರಾರು ಮನೆಗಳಲ್ಲಿ ಬಿರುಕು ಉಂಟಾಗ್ದ್ದಿದು, ಪರಿಸರಕ್ಕೆ ಹಾನಿ ಯಾಗುತ್ತಿದೆ.

ಸ್ಫೋಟಕಗಳಿಂದ ಶಬ್ದ ಮಾಲಿನ್ಯವಾಗುವುದಲ್ಲದೆ, ಬೋರ್‌ವೆಲ್‌ಗಳು ಕುಸಿದಿವೆ ಎಂದು ಅಕ್ರಮ ಗಣಿಗಾರಿಕೆಯ ವಿರುದ್ಧ ಮೇ 27 ರಂದು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸುವ ಭರವಸೆಯನ್ನು ನೀಡಿದ್ದರು.

ಸಚಿವರ ಆದೇಶದಂತೆ ಸ್ಥಳಕ್ಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ,ತರೀಕೆರೆ ಉಪವಿಭಾಗಾಧಿಕಾರಿ ರಂಜಿತಾ,ಜಿ.ಪಂ,ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್, ಸ್ಫೋಟಕ ನಿಯಂತ್ರಕ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ.

ತನಿಖೆಯ ಸಂದರ್ಭದಲ್ಲಿ ಗುತ್ತಿಗೆದಾರ ಮೂರು ಎಕರೆ ಗೋಮಾಳ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮಾನವ ಶಕ್ತಿ ಬಳಸಿ ಸ್ಫೋಟಿಸುವಂತೆ ನಿರ್ದೇಶನ ನೀಡಿದ್ದರೂ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಬಳಸುತ್ತಿರುವ ಕುರಿತು ಮಾಹಿತಿ ಬಂದಿದ್ದರ ಹಿನ್ನೆಲೆಯಲ್ಲಿ ಸ್ಫೋಟಕ ನಿಯಂತ್ರಣ ಮಾಪಕವನ್ನು (ಸಿಸ್ಮೋಗ್ರಾಫ್) ಗಣಿಗಾರಿಕೆ ನಡೆಯುತ್ತಿರುವ ಸಮೀಪದ ಗುಡ್ಡದಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸದ್ಯಕ್ಕೆ ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಈ ಯಂತ್ರವು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನಿಯಂತ್ರಿಸಲಾಗುವುದು ಎಂದು ಅವರು ತಿಳಿಸಿದರು. ತನಿಖೆಯ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರಜಾವಾಣಿಗೆ ಅವರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.