ADVERTISEMENT

ಅಜ್ಜಂಪುರ:ಶಾಲಾಸ್ಥಳ ರಕ್ಷಣೆಗೆ ಮುಂದಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 11:13 IST
Last Updated 6 ಡಿಸೆಂಬರ್ 2013, 11:13 IST

ಅಜ್ಜಂಪುರ: ಪಟ್ಟಣದ ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜಿಗೆ ಸೇರಿದ ಸ್ಥಳದಲ್ಲಿ ಅನಧಿಕೃತವಾಗಿ ಇರಿಸಿರುವ ಗೂಡಂಗಡಿ ತೆರವಿಗೆ ನೀಡಿದ್ದ ಗಡುವು ಅಂತ್ಯಗೊಂಡರೂ ತೆರವುಗೊಳ್ಳದ ಗೂಡಂಗಡಿ ಮುಂಭಾಗ ತಂತಿ–ಕಂಬ ಅಳವಡಿಸಲು ಶಿಕ್ಷಕರು, ವಿದ್ಯಾರ್ಥಿಗಳೇ ಮುಂದಾದ ಘಟನೆ ಗುರುವಾರ ನಡೆಯಿತು.

ಡಿಸೆಂಬರ್ 2011ರಲ್ಲಿ ಸಭೆ ಸೇರಿದ್ದ ಶಾಲೆ ಎಸ್‌ಡಿಎಂಸಿ, ಕಾಲೇಜು ಸಿಡಿಸಿ ಸಮಿತಿಯವರು ಗೂಡಂಗಡಿ ಮಾಲಿಕರಿಗೆ ಮೂರು ತಿಂಗಳೊಳಗೆ ಅಂಗಡಿ ತೆರವುಗೊಳಿಸುವಂತೆ ಸೂಚಿಸಿತ್ತು. ಅಲ್ಲದೇ ಕಳೆದ ವಾರ ಸಭೆ ಸೇರಿದ ಇದೇ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋಗಿ ಎನ್‌. ಪ್ರಕಾಶ್‌, ಸದಸ್ಯರು ಇತ್ತೀಚೆಗೆ ಇರಿಸಿದ್ದ ಹತ್ತಕ್ಕೂ ಹೆಚ್ಚು ಹೊಸ ಗೂಡಂಗಡಿ ತೆರವುಗೊಳಿಸಿ, ತಂತಿ ಕಂಬ ಅಳವಡಿಸಲು ಕ್ರಮಕೈಗೊಂಡಿದ್ದರು. ಆದರೆ ಬಹಳ ಕಾಲದಿಂದ ಇರಿಸಿದ್ದ ಏಳೆಂಟು ಗೂಡಂಗಡಿ ತೆರವಿಗೆ ಸೋಮವಾರದ ವರೆಗೆ ಕಾಲಾವಕಾಶ ನೀಡಿದ್ದರು.

ಸೋಮವಾರ ಕಳೆದರೂ ತೆರವುಗೊಳ್ಳದ ಈ ಅಂಗಡಿಗಳ ಮುಂಭಾಗ ಶಾಲಾ ವಿದ್ಯಾರ್ಥಿಗಳೇ ಕಂಬ ಅಳವಡಿಸಲು ಮುಂದಾದಾಗ ವಿಚಲಿತರಾದ ಮಾಲೀಕರು ಇನ್ನಷ್ಟು ಸಮಯಾವಕಾಶ ನೀಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಗ್ರಾ.ಪಂ. ಅಧ್ಯಕ್ಷರು ಶಾಸಕರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ, ಚರ್ಚಿಸಿದ ನಂತರ  ತಂತಿ ಕಂಬ ಅಳವಡಿಸುವ ವಿದ್ಯಾರ್ಥಿಗಳ ಕಾರ್ಯಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದರು. ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಏಕಾಏಕಿ ತೆರವು ಗೊಳಿಸುವುದರಿಂದ ಗೂಡಂಗಡಿ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬೀಳುವ ಸಂಭವವಿದೆ. ಮಾನವೀಯತೆಯ ದೃಷ್ಠಿಯಿಂದ 3 ತಿಂಗಳು ಕಾಲಾವಕಾಶ ನೀಡಿದ್ದು, ಬೇರೆಡೆಗೆ ಸ್ಥಳಾಂತರಿಸು­ವಂತೆ ಸೂಚಿಸಿರುವುದಾಗಿ ತಿಳಿಸಿದರು.

ತಂತಿ ಕಂಬ ಅಳವಡಿಕೆ ಕಾರ್ಯಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗಿದೆ ಎಂಬ ಸಾರ್ವಜನಿಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜು ಉಪಪ್ರಾಂಶುಪಾಲ ನಾಗರಾಜು ಮತ್ತು ಕಾಲೇಜು ಪ್ರಾಚಾರ್ಯ ಬಸವರಾಜು, ಗೂಡಂಗಡಿ­ಯವರ ವಿರೋಧದಿಂದಾಗಿ ಕಂಬ ನೆಡಲು ಯಾವ ಕಾರ್ಮಿಕರೂ ಮುಂದಾಗದಿದ್ದಾಗ, ಅನಿವಾರ್ಯ­ವಾಗಿ ವಿದ್ಯಾರ್ಥಿಗಳನ್ನು ಬಳಸಲಾಗಿದೆ. ವಿದ್ಯಾರ್ಥಿ­ಗಳೂ ಸ್ವಯಂ ಸ್ಫೂರ್ತಿಯಿಂದ ಶ್ರಮದಾನ ಮಾಡುವ ಮೂಲಕ ಶಾಲಾ ಆಸ್ತಿಯನ್ನು ರಕ್ಷಿಸುವು­ದಾಗಿ ಕೆಲಸ ಮಾಡಲು ಮುಂದೆ ಬಂದಿದ್ದರು. ಶಿಕ್ಷಕರೂ ಕೈಜೋಡಿಸಿದ್ದಾಗಿ ತಿಳಿಸಿದರು.

ಗೂಡಂಗಡಿ ತೆರವುಗೊಳಿಸುವಂತೆ ವಿವಿಧ ಸಂಘ ಸಂಸ್ಥೆಗಳ ಒತ್ತಡ, ತೆರವು ಗೊಳಿಸದಂತೆ ನೋಡಿಕೊಳ್ಳುವ ಕೆಲವರ ಒತ್ತಡದ ನಡುವೆ ಶಾಲಾ ಪ್ರಾಚಾರ್ಯರು, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಘಟನೆಗೆ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಕ್ರಮ ಕೈಗೊಳ್ಳ­­ಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.