ADVERTISEMENT

ಅಜ್ಜಂಪುರ: 300 ಮೀಟರ್ ರಸ್ತೆ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 5:57 IST
Last Updated 6 ಅಕ್ಟೋಬರ್ 2017, 5:57 IST
ಗುಂಡಿಬಿದ್ದಿರುವ ಅಜ್ಜಂಪುರದ ಟಿ.ಎಚ್ ರಸ್ತೆ-ರೈಲುನಿಲ್ದಾಣದವರೆಗಿನ ಹದಗೆಟ್ಟ ರಸ್ತೆ.
ಗುಂಡಿಬಿದ್ದಿರುವ ಅಜ್ಜಂಪುರದ ಟಿ.ಎಚ್ ರಸ್ತೆ-ರೈಲುನಿಲ್ದಾಣದವರೆಗಿನ ಹದಗೆಟ್ಟ ರಸ್ತೆ.   

ಅಜ್ಜಂಪುರ: ತೀವ್ರ ಹದಗೆಟ್ಟಿರುವ ಪಟ್ಟಣದ ಟಿ.ಎಚ್ ರಸ್ತೆಯಿಂದ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಹಾಗೂ ರೈಲು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಈ 300 ಮೀಟರ್ ರಸ್ತೆಯಲ್ಲಿ 300ಕ್ಕೂ ಅಧಿಕ ಗುಂಡಿಗಳು ಬಿದ್ದಿದ್ದು, ಇಡೀ ರಸ್ತೆಯ ಟಾರ್ ಕಿತ್ತುಬಂದಿದ್ದು, ಜಲ್ಲಿ ಕಲ್ಲುಗಳು ಹೊರಬಂದಿವೆ. ರಸ್ತೆಯ ಅಡಿಗಡಿಗೂ ಅರ್ಧ-ಮುಕ್ಕಾಲು ಅಡಿಗಳಷ್ಟು ಆಳದ ಗುಂಡಿಗಳು ನಿರ್ಮಾ ಣವಾಗಿವೆ. ರಸ್ತೆ, ಬೈಕ್, ಆಟೊ ಕಾರು ಸೇರಿದಂತೆ ಯಾವುದೇ ವಾಹನಗಳೂ ಚಲಿಸಲಾರದಷ್ಟು ದುಃಸ್ಥಿತಿ ತಲುಪಿದೆ. ಇನ್ನು ಮಳೆ ಯಿಂದಾಗಿ ರಸ್ತೆಗುಂಡಿಗಳಲ್ಲಿ ಸಂಗ್ರಹಗೊಂಡಿರುವ ಮಳೆನೀರು ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ.

ಪಟ್ಟಣದ ಕನ್ನಡ ನೂತನ ಶಾಲೆಯಿಂದ ರೈಲ್ವೆಗೇಟ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಂದುವರೆದ ಭಾಗದಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನೂ ಸೇರಿಸಲಾಗಿದೆ. ಆದರೆ ಶಾಲೆ-ರೈಲ್ವೆಗೇಟ್‌ವರೆಗಿನ ರಸ್ತೆ ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಸ್ಥಳೀಯರ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಕಾಮಗಾರಿ ವಿಳಂಬ ಆಗುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕರ ಆರೋಪ.

ADVERTISEMENT

ರೈಲು ಪ್ರಯಾಣಕ್ಕಾಗಿ ದಿನನಿತ್ಯ ಕನಿಷ್ಠ ಸಾವಿರಕ್ಕೂ ಅಧಿಕ ರೈಲ್ವೆ ಪ್ರಯಾಣಕರು ರೈಲುನಿಲ್ದಾಣ ತಲುಪಲು ಈ ರಸ್ತೆಯನ್ನೇ ಅವಲಂಬಿಸಿದ್ದು, ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಸದರಿ ರಸ್ತೆಯನ್ನು ಅಭಿವೃದ್ಧಿಪಡಿಸಿ, ಅನುಕೂಲ ಮಾಡಿಕೊಡುವಂತೆ ರೈಲ್ವೆ ಪ್ರಯಾಣಿಕರು, ವಾಹನ ಸವಾರರು, ಜೈಕರ್ನಾಟಕ ಆಟೊ ಚಾಲಕ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.