ADVERTISEMENT

ಅಣ್ಣ ತಂಗಿಯರ ಬಾಂಧವ್ಯ ವೃದ್ಧಿಸುವ ನಾಗರ ಪಂಚಮಿ!

ಜಿನೇಶ್ ಇರ್ವತ್ತೂರು
Published 12 ಆಗಸ್ಟ್ 2013, 5:21 IST
Last Updated 12 ಆಗಸ್ಟ್ 2013, 5:21 IST
ಕೊಪ್ಪದ ಅರಳಿಕಟ್ಟೆ ನಾಗದೇವಸ್ಥಾನದಲ್ಲಿ ನಾಗರ ಪ್ರತಿಮೆಗೆ ತನಿ ಪೂಜೆ ಸಲ್ಲಿಸುತ್ತಿರುವ  ಭಕ್ತ ಸಮೂಹ
ಕೊಪ್ಪದ ಅರಳಿಕಟ್ಟೆ ನಾಗದೇವಸ್ಥಾನದಲ್ಲಿ ನಾಗರ ಪ್ರತಿಮೆಗೆ ತನಿ ಪೂಜೆ ಸಲ್ಲಿಸುತ್ತಿರುವ ಭಕ್ತ ಸಮೂಹ   

ಕೊಪ್ಪ: ಹಬ್ಬಗಳ ಸಾಲಿನಲ್ಲಿ ಮೊದಲು ಬರುವ ನಾಗರ ಪಂಚಮಿ ಅಣ್ಣ ತಂಗಿಯರ ಬಾಂಧವ್ಯ ವೃದ್ಧಿ ಸುವ ಹಬ್ಬವೆಂದೇ ಪ್ರತೀತಿ ಪಡೆದಿದೆ.

ಶ್ರಾವಣ ಮಾಸ ಹಬ್ಬಗಳ ಹೆಬ್ಬಾಗಿಲು. ನಾಗರ ಪಂಚಮಿ ಯೊಂದಿಗೆ ಆರಂಭವಾಗುವ ಹಬ್ಬ ಗಳ ಆಚರಣೆ ಇದೇ ಮಾಸದಲ್ಲಿ ಗೋಕುಲಾಷ್ಟಮಿ, ಭಾದ್ರಪದ ಮಾಸದಲ್ಲಿ ಗೌರಿ-ಗಣೇಶ ಹಬ್ಬ, ಆಶ್ವೀಜ ಮಾಸದಲ್ಲಿ ನವರಾತ್ರಿ ಉತ್ಸವ, ಕಾರ್ತಿಕ ಮಾಸದಲ್ಲಿ ದೀಪಾವಳಿ ಹೀಗೆ ಸಾಲು ಸಾಲಾಗಿ ಮುಂದುವರಿಯುತ್ತವೆ.

ಶ್ರಾವಣ ಶುದ್ಧ ಪಂಚಮಿಯಂದು ಆಚರಣೆಗೊಳ್ಳುವ ನಾಗರ ಪಂಚಮಿ ದಿನ ಮನೆಮಂದಿಯೆಲ್ಲ ಮುಂಜಾನೆ ಎದ್ದು, ಮಿಂದು ಮಡಿಯುಟ್ಟು ನಾಗರಬನಕ್ಕೆ ತೆರಳಿ ಹಾಲು, ಎಳನೀರಿನಿಂದ ನಾಗದೇವರಿಗೆ ತನಿ ಎರೆದು ಬರುತ್ತಾರೆ. ಗ್ರಾಮೀಣ ಭಾಗದ ಕೂಡುಕುಟುಂಬವಿರುವ ಸಂಪ್ರದಾಯಸ್ಥ ಮನೆಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

ಗೃಹಿಣಿಯರಿಗೆ ತವರಿನಿಂದ ಬರುವ ಅಣ್ಣಂದಿರನ್ನು ಕಾಣುವ ಸಂಭ್ರಮ. ಹುಲಿಕೊನೆಯ ಸೊಪ್ಪಿನಿಂದ ಅಣ್ಣಂದಿರ ನೆತ್ತಿ ನೇವರಿಸಿ, ಬಾಗಿನ ಕೊಟ್ಟು ಆಶೀರ್ವಾದ ಪಡೆಯುತ್ತಾರೆ. ಹಿಂದೊಂದು ಕಾಲದಲ್ಲಿ ನಾಗರ ಹಾವು ಕಚ್ಚಿ ಮೃತಪಟ್ಟ ಅಣ್ಣನನ್ನು ಬದುಕಿಸಲು ನಾಗದೇವರನ್ನು ಪ್ರಾರ್ಥಿಸಿದ ತಂಗಿ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ನಾಗದೇವರು ಹುಲಿಕೊನೆಯ ಸೊಪ್ಪನ್ನು ಸೋಕಿಸಿದಲ್ಲಿ ಆಕೆಯ ಅಣ್ಣ ಮರು ಜೀವ ಪಡೆಯುವುದಾಗಿ ವರ ವಿತ್ತಿದ್ದು, ಅದರಂತೆ ಹುಲಿಕೊನೆಯ ಸೊಪ್ಪಿನಿಂದ ಅಣ್ಣನ ನೆತ್ತಿ ನೇವರಿಸುತ್ತಿದ್ದಂತೆ ಆತ ಮರುಜೀವ ಪಡೆದನೆಂಬ ಜಾನಪದ ಹಿನ್ನೆಲೆ ಈ ಆಚರಣೆಗಿದೆ.

ಅಕ್ಕಿ ಹಿಟ್ಟಿನಿಂದ ನಾಗರ ಪ್ರತಿಮೆ ಮಾಡಿ ಅರಶಿನದೆಲೆಯ ಕಡುಬು, ಪಾಯಸ, ಚಕ್ಕುಲಿ, ಹೋಳಿಗೆ, ಎಳ್ಳು ತಂಬಿಟ್ಟು, ಹೆಸರು ತಂಬಿಟ್ಟು, ಅಕ್ಕಿ ತಂಬಿಟ್ಟು ಮುಂತಾದ ಬಗೆಬಗೆಯ ವಿಶೇಷ ಖಾದ್ಯ ತಯಾರಿಸಿ ನಾಗರಿಗೆ ನೈವೇದ್ಯ ಅರ್ಪಿಸಿ ಪೂಜಿಸಿದ ಬಳಿಕ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಊಟಮಾಡಿ ಹಬ್ಬದ ಸಂಭ್ರಮ ಆಚರಿಸುತ್ತಾರೆ. ನಾಗನಿಗೆ ಹಸುವಿನ ಹಾಲೇ ಶ್ರೇಷ್ಠವಾದರೂ ನಾಗರಿಕತೆ ಬೆಳೆದಂತೆಲ್ಲ. ಹಸುಗಳ ಸಂಖ್ಯೆ ಕ್ಷೀಣಿಸಿದ್ದು, ಹಾಲಿಗಾಗಿ ಪರದಾಡುವ ಪ್ರಸಂಗ ಬಂದಿದೆ.

ಹೆಚ್ಚಿನ ಮನೆಗಳಲ್ಲಿ ಹಸುಗಳು ಮಾಯವಾಗಿ ಹಟ್ಟಿಯೂ ಇಲ್ಲವಾಗಿದೆ. ಪಟ್ಟಣ ಪ್ರದೇಶಗಳಲ್ಲಂತೂ ರೆಡಿಮೇಡ್ ನಾಗರ ಕಟ್ಟೆಗಳಲ್ಲಿ ನಂದಿನಿ ಹಾಲಿನ ಪ್ಯಾಕೆಟ್ಟುಗಳನ್ನೇ ತಂದು ಪುರೋಹಿತರ ಕೈಗೆ ಕೊಟ್ಟು ಹಾಲೆರೆಸುವ ಅನಿವಾರ್ಯತೆ ಸೃಷ್ಟಿ ಯಾಗಿದೆ. ಆಚರಣೆಯ ವಿಧಾನ ಬದ ಲಾದರೂ ಸಂಪ್ರದಾಯ ಪಾಲಿಸುವ ಉತ್ಸಾಹ ಕಡಿಮಯಾದಂತಿಲ್ಲ. ಅಷ್ಟರ ಮಟ್ಟಿಗೆ ಹಬ್ಬಗಳು ಜೀವಂತಿಕೆ ಪಡೆದಿವೆ.                                    
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.