ಕಳಸ: `ಮನೆಯಿಂದ ಕಳಸಕ್ಕೆ ಹೋಗಿ ಬರುವುದರ ಒಳಗೆ ಮೂರ‌್ನಾಲ್ಕು ಸಾರಿ ಬೈಕ್‌ನಿಂದ ಬೀಳಬೇಕು. ಪೇಟೆಗೆ ಹೋಗಿ ಬರುವುದೆಂದರೆ ಭಾರಿ ಸಾಹಸದ ಕೆಲ್ಸ ಆಗಿದೆ...' ಚಿಕ್ಕೋಡಿಗೆ ಗ್ರಾಮದ ಯುವಕ ಸುಧೀರ್ ಈ ಮಾತುಗಳನ್ನು ಹೇಳುವುದು ಕಳಸ-ಚಿಕ್ಕೋಡಿಗೆ- ಸೂರುಮನೆ ರಸ್ತೆಯ ದುಸ್ಥಿತಿಯನ್ನು ಮನದಟ್ಟು ಮಾಡಲು.
100ಕ್ಕೂ ಹೆಚ್ಚು ಮನೆಗಳು ಇದ್ದು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದ ರಸ್ತೆಯು ಮಳೆಗಾಲ ಹಿಡಿಯುವ ಮುನ್ನವೇ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಇನ್ನು ಅನಾರೋಗ್ಯದಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಪೇಟೆ ತಲುಪುವುದು ಹೇಗೋ ಎಂಬ ತಲೆನೋವು ಈಗಲೇ ಜನರನ್ನು ಬಾಧಿಸತೊಡಗಿದೆ.
ಕಳೆದ ವರ್ಷ ರಸ್ತೆಗೆ ಹಾಕಿದ್ದ ಕೆಂಪು ಮಣ್ಣು ಕೆಸರಾಗಿ ಪರಿವರ್ತನೆ ಹೊಂದಿದ್ದು ರಸ್ತೆಯಲ್ಲಿ ವಾಹನಗಳಿರಲಿ, ಪಾದಚಾರಿಗಳು ಕೂಡ ನಡೆದಾಡಲು ಹೆದರುವಂತಾಗಿದೆ. ಗೇರು ತೋಟದ ಕಡಿದಾದ ರಸ್ತೆಯ ಮೂಲಕ ಹಾದು ಚಿಕ್ಕೊಡಿಗೆ, ಅಬ್ಬುಗುಡಿಗೆ, ಸೂರುಮನೆ ಸೇರುವ ಗ್ರಾಮಸ್ಥರಿಗೆ ರಸ್ತೆಯ ಈ ಸ್ಥಿತಿಯು ಚಿಂತೆ ಮೂಡಿಸಿದೆ.
`ಎಷ್ಟು ವರ್ಷದಿಂದ ರಸ್ತೆಗಾಗಿ ಯಾರಿಗೆ ಮನವಿ ಕೊಟ್ರೂ ಪ್ರಯೋಜನ ಆಗಿಲ್ಲ. ಮನವಿ ಕೊಟ್ಟು ಕೊಟ್ಟು ಸಾಕಾಯ್ತು. ಫಲಿತಾಂಶ ಮಾತ್ರ ಸೊನ್ನೆ...' ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.
`ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ಬಂದಾಗ ಗ್ರಾಮಸ್ಥರೇ ಸೇರಿಕೊಂಡು ರಸ್ತೆಗೆ ಗ್ರಾವೆಲ್ ಹಾಕಿ ದುರಸ್ತಿ ಮಾಡ್ತಿದ್ದೀವಿ. ಪ್ರತಿ ವರ್ಷವೂ ಇದೇ ಗೋಳು. ಈ ವರ್ಷ ಶಾಶ್ವತ ದುರಸ್ತಿ ಮಾಡಿಕೊಡದೇ ಇದ್ರೆ ಪ್ರತಿಭಟನೆ ನಡೆಸ್ತೀವಿ' ಎಂದು ಕೋಪ ಪ್ರದರ್ಶಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.