ADVERTISEMENT

ಅನುದಾನದ ಹಣ ಹಂಚಿಕೆ; ಸದಸ್ಯರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 9:05 IST
Last Updated 3 ಜುಲೈ 2012, 9:05 IST

ಕಡೂರು: ಅನಿರ್ಬಂಧಿತ ಅನುದಾನದ ಉಳಿಕೆ ಹಣ ಹಂಚಿಕೆ ವಿಷಯದಲ್ಲಿ ಹಿರೇನಲ್ಲೂರು ಕ್ಷೇತ್ರದ ಪ್ರಭುಕುಮಾರ್ ಮತ್ತು ಬಿಸಲೆರೆ ಕ್ಷೇತ್ರದ ಸದಸ್ಯೆ ರತ್ನಾ ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಗಂಟೆಗೂ ಹೆಚ್ಚು ಕಾಲ ಅಧ್ಯಕ್ಷರು ಮೌನಕ್ಕೆ ಶರಣಾದ ಘಟನೆ ನಡೆಯಿತು.

ತಾ.ಪಂ. ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಸುನೀತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಒಮ್ಮತವಿಲ್ಲದೆ ಗಲಾಟೆ ಗದ್ದಲದಲ್ಲೇ ಕಾಲಹರಣ ವಾಯಿತು.

11-12 ನೇ ಸಾಲಿನ 1 ಕೋಟಿ ಅನಿರ್ಬಂಧಿತ ಅನು ದಾನದಲ್ಲಿ ಉಳಿಕೆ ಮೊತ್ತ 19 ಲಕ್ಷದಲ್ಲಿ ಕನಿಷ್ಠ 3ಲಕ್ಷದ ಕಾಮಗಾರಿಯನ್ನು ನೀಡಬೇಕೆಂದು ಸದಸ್ಯೆ ರತ್ನಾ ಅವರು ಸಭೆಯ ಗಮನಕ್ಕೆ ತಂದಾಗ ಇತರ 23 ಸದಸ್ಯರಿಗೆ ಸಹ ಹಂಚಿಕೆಯಾಗಬೇಕೆಂದು ಉಳಿದ ಸದಸ್ಯರ ಪರವಾಗಿ ಪ್ರಭುಕುಮಾರ್ ಪಟ್ಟು ಹಿಡಿದರು. ಆಗ ಗೊಂದಲದ ವಾತಾವರಣ ಏರ್ಪಟ್ಟು ಅಂತಿಮವಾಗಿ ಕುಂಕನಾಡು ಕ್ಷೇತ್ರದ ಬಸವರಾಜು ಮತ್ತು ಪ್ರಭುಕುಮಾರ್ ಅವರಿಗೆ ಶೇ 15ರಷ್ಟು ಮೀಸಲಿಟ್ಟು ಉಳಿದ ಸದಸ್ಯರಿಗೆ ಹಂಚಲಾಗುವುದು ಎಂಬ ನಿರ್ಣಯಕ್ಕೆ ಸರ್ವ ಸದಸ್ಯರು ಸಮ್ಮತಿ ಸೂಚಿಸುವುದರ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಯಿತು.

ಇದಕ್ಕೂ ಮೊದಲು 10.30 ಕ್ಕೆ ಆರಂಭವಾಗಬೇಕಿದ್ದ ಸಾಮಾನ್ಯ ಸಭೆ 12 ಗಂಟೆಗೆ ಆರಂಭವಾಗಿದ್ದರಿಂದ ಸದಸ್ಯ ನೀಲಕಂಠಪ್ಪ, ಪ್ರಭು, ನಿಂಗಪ್ಪ, ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕ್ಷಮೆಯಾಚಿಸಿದ ಅಧ್ಯಕ್ಷರು ಸಭೆಯನ್ನು ಮುಂದುವರಿಸಿದರು.

13ನೇ ಹಣಕಾಸಿನ ಯೋಜನೆಯಲ್ಲಿ ವಾಹನ ಖರೀದಿಸಲು 6 ಲಕ್ಷ, ಕಂಪ್ಯೂಟರ್ 2ಲಕ್ಷ, ಬಯೊಮೆಟ್ರಿಕ್ ಯಂತ್ರಕ್ಕೆ 30ಸಾವಿರ ಮೀಸಲಿಡಲು ಒಪ್ಪಿಗೆ ಪಡೆಯಲಾಯಿತು. 3054ರ ಯೋಜನೆಯ ಅಂದಾಜು ಕ್ರಿಯಾ ಯೋಜನೆ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿ , ಕಾಂಗ್ರೆಸ್ ಸದಸ್ಯರ ಮಧ್ಯೆ ಪುನಃ ಗಲಾಟೆ ಆರಂಭವಾದಾಗ ಬೇಸತ್ತ ಅಧಿಕಾರಿಗಳು ಸಭೆಯಿಂದ  ಹೊರ ಹೋಗಿಬರುತ್ತಿದ್ದರು.
 
ಇದನ್ನರಿತ ಕಾರ್ಯನಿರ್ವಹಣಾಧಿಕಾರಿ ಮೂರ್ತಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆದ ನಂತರ ಕ್ರಿಯಾ ಯೋಜನೆಗಳ ಚರ್ಚೆ ನಡೆಸೋಣ ಎಂಬ ಸಲಹೆ ನೀಡಿದಾಗ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

   ಮಧ್ಯೆ ಪ್ರವೇಶಿಸಿದ ಶಾಸಕ ಡಾ.ವಿಶ್ವನಾಥ್ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಪಂಚಾಯತಿ ಎಂಜಿನಿಯರ್ ಅವರನ್ನು ಪ್ರಶ್ನಿಸಿದಾಗ ಸದಸ್ಯರು ತಮ್ಮ ತಮ್ಮ  ಕೇತ್ರಗಳಲ್ಲಿನ ಸಮಸ್ಯೆಗಳನ್ನು ಮುಂದಿಟ್ಟರು. ಕುಂಕನಾಡು, ಹುಲಿಕೆರೆ, ಲಕಡಿಕೋಟೆ, ಬಳ್ಳೆಕೆರೆ, ಜಿಗಣೆಹಳ್ಳಿ, ಹೊನಭೋಗಿಹಳ್ಳಿ, ಪಿಳ್ಳೇನಳ್ಳಿ, ಮಡಿಕೆಹೊಸಳ್ಳಿ, ಜೋಡಿಹೋಚಿಹಳ್ಳಿ, ಹಿರೇನಲ್ಲೂರು, ಸರಸ್ವತಿಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಜಿ.ಪಂ.ಎಂಜಿನಿಯರ್  ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪೈಪ್‌ಲೈನ್, ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಸಿ ಕೂಡಲೇ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. 

   ತಾಲ್ಲೂಕಿನಲ್ಲಿ 455 ಅಂಗನವಾಡಿಗಳಿದ್ದು ಇದರಲ್ಲಿ 265 ಕೇಂದ್ರಗಳಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಉಳಿದ 190 ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು ಸಂಬಂಧಪಟ್ಟ ಏಜೆನ್ಸಿಗಳಿಗೆ ಪತ್ರ ನೀಡಬೇಕು, ಮಂಜುನಾಥಪುರ,ಗೌಡನಕೊಪ್ಪಲು, ಆಸಂದಿ, ಚಿಕ್ಕದೇವನೂರು, ಕರೆಕಲ್ಲಳ್ಳಿ ಗ್ರಾಮಗಳಲ್ಲಿ ಅಪೂರ್ಣಗೊಂಡಿರುವ ಕಟ್ಟಡಗಳನ್ನು 14.50 ಲಕ್ಷ ರೂಗಳಲ್ಲಿ ಪೂರ್ಣಗೊಳಿಸುವುದಾಗಿ ಸಿಡಿಪಿಒ ಗುರುಸಿದ್ದಯ್ಯ ಸಭೆಯ ಗಮನಕ್ಕೆ ತಂದರು.

  ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ತೋಟಗಾರಿಕೆ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ ಮತ್ತು ಇತರೆ ಇಲಾಖೆಗಳ 12-13 ನೇ ಸಾಲಿನ ಕ್ರಿಯಾಯೋಜನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.ಇತರ ವಿಷಯಗಳ ಚರ್ಚೆ ಮುಂದುವರೆದಿದ್ದರಿಂದ ಸಂಜೆ 7 ಗಂಟೆಯಾದರೂ ಸಭೆ ಮುಕ್ತಾಯದ ಲಕ್ಷಣಗಳು ಕಾಣಲಿಲ್ಲ.

   ಜಿ.ಪಂ.ಉಪಕಾರ್ಯದರ್ಶಿ(ಆಡಳಿತ)ಯಾಲಕ್ಕಿಗೌಡ, ಉಪಾಧ್ಯಕ್ಷೆ ಜಯಬಾಯಿ,ಸದಸ್ಯರಾದ ಶಶಿಕುಮಾರ್,ಬಸಪ್ಪ ಶಿವಕುಮಾರ್, ತುಂಗಮ್ಮ, ಬಸವರಾಜಪ್ಪ, ನೀಲಕಂಠಪ್ಪ, ಮಹಾಲಕ್ಷ್ಮಿ, ಮಲ್ಲಿಗಮ್ಮ, ಓಂಕಾರಮೂರ್ತಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.