ಚಿಕ್ಕಮಗಳೂರು: `ಕ್ಷೇತ್ರದಲ್ಲಿ 3 ವರ್ಷದ ಅವಧಿಯಲ್ಲಿ ಮಾಜಿ ಶಾಸಕರು, ಸಚಿವರು ಹಾಸ್ಟೆಲ್‌ಗಳ ಅಭಿವೃದ್ಧಿಗೆ ರೂ. 27 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿಸಿದ್ದನ್ನು ದಾಖಲೆ ಸಮೇತ ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ~ ಎಂದು ಶಾಸಕ ಸಿ.ಟಿ. ರವಿ ಸವಾಲೆಸೆದಿದ್ದಾರೆ.
ನಗರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರ ವಾಜಪೇಯಿ ವಸತಿ ಯೋಜನೆಯಡಿ ಇಂದಿರಾಗಾಂಧಿ ಬಡಾವಣೆಯ 747 ನಿವೇಶನಗಳ ಪೈಕಿ 300 ನಿವೇಶನದಾರರಿಗೆ ರೂ. 15 ಸಾವಿರ ಮೊತ್ತದ ಚೆಕ್ ವಿತರಿಸಿ ಅವರು ಮಾತನಾಡಿದರು.
`ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಹಾಸ್ಟೆಲ್ ನಿರ್ಮಾಣ ಹಾಗೂ ಅಭಿವೃದ್ಧಿಗೆ ರೂ. 27.21 ಕೋಟಿ ಅನುದಾನ ತಂದಿದ್ದೇನೆ. ಆರ್‌ಟಿಒ ಕಟ್ಟಡ, ಐಟಿಐ ಕಟ್ಟಡ, ಮಿನಿವಿಧಾನ ಸೌಧಕ್ಕೆ ಚಾಲನೆ ನೀಡಲಾಗಿದೆ~ ಎಂದು ಹೇಳಿದರು.
ಕಮಿಷನ್ ಆಸೆಗಾಗಿ ಹೊನ್ನಮ್ಮನ ಹಳ್ಳದಿಂದ ಬಂದಿದ್ದ ಪೈಪ್‌ಲೈನ್ ಕಿತ್ತು ಮಾರಾಟ ಮಾಡಲಾಗಿದೆ. ಯಗಚಿ ಕುಡಿಯುವ ನೀರಿನ ಯೋಜನೆ ಬಿಳಿ ಆನೆ ಸಾಕಿದಂತಾಗುತ್ತಿದೆ ಎಂದು ಅವರು ದೂರಿದರು.
ಕುಡಿಯುವ ನೀರಿನ ಯೋಜನೆಗಾಗಿ ರೂ. 5.5 ಕೋಟಿ ವೆಚ್ಚದಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಪೂರೈಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷ ನಿಂಗೇಗೌಡ, ಉಪಾಧ್ಯಕ್ಷೆ ಹಿತಾಕ್ಷಿ ಚೆನ್ನಕೇಶವ, ಆಶ್ರಯ ಸಮಿತಿ ಸದಸ್ಯರಾದ ಮನೋಹರ್, ಗೋಪಿ, ನಗರಸಭೆ ಸದಸ್ಯರಾದ ಪ್ರೇಮ್ ಕುಮಾರ್, ಜಾನಯ್ಯ, ಮುತ್ತಯ್ಯ, ಕಸ್ತೂರಿ ಎಸ್.ಪವಾರ್, ಪೌರಾಯುಕ್ತ ವಿ.ಎಚ್.ಕೃಷ್ಣಮೂರ್ತಿ, ಎಂಜಿನಿಯರ್ ಪುರುಷೋತ್ತಮ್, ಕಂದಾಯಾಧಿಕಾರಿ ಬಸವರಾಜ್, ರಮೇಶ್‌ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.