ನರಸಿಂಹರಾಜಪುರ: ಪಟ್ಟಣದ ಹಲವು ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿರುವ ಪಟ್ಟಣ ಪಂಚಾಯಿತಿ ಕಳೆದರೆಡು ವರ್ಷಗಳ ಹಿಂದೆ ಸುಸಜ್ಜಿತವಾಗಿದ್ದ ರಸ್ತೆ ಮತ್ತು ಚರಂಡಿಯನ್ನು ಕಿತ್ತು ಹಾಕಿದ ಪರಿಣಾಮ ಇಲ್ಲಿನ ಪಟ್ಟಣದ 1ನೇ ವಾರ್ಡ್‌ನ ವ್ಯಾಪ್ತಿಗೊಳಪಡುವ ಶಾರದಾ ವಿದ್ಯಾಮಂದಿರ ಹಿಂಭಾಗದ ರಸ್ತೆ ಮತ್ತು ಚರಂಡಿ ಇಂದಿಗೂ ದುರಸ್ತಿ ಕಾಣದೆ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.
ಈ ರಸ್ತೆಯು 1ನೇ ವಾರ್ಡಿನ ವ್ಯಾಪ್ತಿಗೊಳಪಡುವ ಮಂಡಗದ್ದೆ ರಸ್ತೆಯಿಂದ ನೆಹರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಈ ಹಿಂದೆ ಇಲ್ಲಿನ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸಮರ್ಪಕವಾಗಿತ್ತು. ಕಳೆದೆರೆಡು ವರ್ಷಗಳ ಹಿಂದೆ ರಸ್ತೆ ಮತ್ತು ಚರಂಡಿಯನ್ನು ದುರಸ್ತಿ ಪಡಿಸುವ ಉದ್ದೇಶದಿಂದ ಸುಸಜ್ಜಿತ ವಾಗಿದ್ದ ಚರಂಡಿ ಮತ್ತು ರಸ್ತೆಯನ್ನು ಪಟ್ಟಣ ಪಂಚಾಯಿತಿ ಕಿತ್ತು ಹಾಕಿದರು ಎಂದು ಬಡಾವಣೆ ನಿವಾಸಿಗಳು ಆರೋಪಿಸುತ್ತಾರೆ.
ಆದರೆ ಇದುವರೆಗೂ ರಸ್ತೆಯನ್ನಾಗಲಿ ಹಾಗೂ ಚರಂಡಿಯನ್ನಾಗಲಿ ದುರಸ್ತಿ ಪಡಿಸದೆ ಇರುವುದರಿಂದ ಜನ ಮತ್ತು ದ್ವಿಚಕ್ರವಾಹನಗಳು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಲ್ಲದೆ ಮನೆಯ ಬಚ್ಚಲು ನೀರು ಮತ್ತು ಮಳೆಗಾಲದಲ್ಲಿ ಬರುವ ಮಳೆ ನೀರು ಸರಾಗವಾಗಿ ಹರಿಯದೇ ಕೊಳಚೆ ನೀರು ಅಲ್ಲಲ್ಲಿಯೇ ನಿಂತು ದುರ್ನಾತ ಬೀರುತ್ತಿದೆ ಸೊಳ್ಳೆಗಳು ಹೆಚ್ಚಾಗಿ ನಾಗರೀಕರು ವಾಸಿಸಲು ತೊಂದರೆಯಾಗಿದೆ.ಇದನ್ನು ದುರಸ್ತಿ ಪಡಿಸುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಾಗೂ ವಾರ್ಡ್‌ನ ಸದಸ್ಯರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ತಿಳಿಸುತ್ತಾರೆ.
ಈ ರಸ್ತೆ ಹಾಗೂ ಚರಂಡಿಯ ದುರಸ್ತಿಯ ಕಾಮಗಾರಿಯನ್ನು ಇದುವರೆಗೆ ಯೋಜನೆಯಲ್ಲಿ ಸೇರಿಸಲಾಗಿಲ್ಲ ಹಾಗಾಗಿ ಇದು ನೆನೆಗುದಿಗೆ ಬಿದ್ದಿದೆ ಈ ಸಾಲಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಮಸ್ಯೆಯ ಬಗ್ಗೆ ಪ್ರಜಾವಾಣಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಂಕರಪ್ಪ ಪ್ರತಿಕ್ರಿಯಿಸಿದರು.ಒಟ್ಟಿನಲ್ಲಿ ಸಂಬಂಧ ಪಟ್ಟವರು ಕೂಡಲೇ ಇತ್ತಗಮನಹರಿಸಿ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸಬೇಕಾಗಿ ನಿವಾಸಿಗಳು ಒತ್ತಾಯಿಸಿದ್ದಾರೆ.
ಕೆ.ವಿ.ನಾಗರಾಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.