ADVERTISEMENT

ಅಮೃತಮಹಲ್ ರಾಸು ಹರಾಜು; ರೈತರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 8:20 IST
Last Updated 7 ಜನವರಿ 2012, 8:20 IST

ಚಿಕ್ಕಮಗಳೂರು: ಅಮೃತ್‌ಮಹಲ್ ತಳಿ ಹೋರಿ ಭಾರತೀಯ ಗೋವುಗಳಲ್ಲಷ್ಟೇ ಅಪರೂಪವಲ್ಲ, ರೈತರ ಕಣ್ಮಣಿ ಮತ್ತು ಪ್ರತಿಷ್ಠೆಯ ಪ್ರತೀಕವೂ ಹೌದು. ಇಂತಹ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಅಮೃತ್ ಮಹಲ್ ತಳಿ ಹೋರಿಗಳ ಹರಾಜು ತಿಪಟೂರಿನ ಕೊನೇಹಳ್ಳಿಯಲ್ಲಿ ಇದೇ 11ರಂದು ಮತ್ತು ಬೀರೂರಿನ ಅಮೃತ್ ಮಹಲ್ ಕಾವಲ್ ರಾಸು ತಳಿ ಸಂವರ್ಧನ ಕೇಂದ್ರದಲ್ಲಿ ಜ.18ರಂದು ನಡೆಯಲಿದೆ.

ಪೈಪೋಟಿಯ ಹರಾಜು ನಡೆಯುವಂತೆ ಕಾಣುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಭಾಗವಹಿಸುವ ನಿರೀಕ್ಷೆ ಇದೆ.

ಈ ಬಾರಿ 62 ಕರುಗಳು ಮತ್ತು ಬೀಜದ 4 ಹೋರಿಗಳು ಹರಾಜಿಗೆ ಸಿದ್ಧವಾಗಿವೆ. ಕಳೆದ ವರ್ಷ ಈ ಕೇಂದ್ರಗಳಲ್ಲಿ ಒಂದೊಂದು ಜೋಡಿ ಕನಿಷ್ಠ 45 ಸಾವಿರ ರೂಪಾಯಿಂದ 1.37 ಲಕ್ಷ ರೂಪಾಯಿಗೆ ಹರಾಜಾಗಿದ್ದವು. ಅರಸೀಕೆರೆ ತಾಲ್ಲೂಕಿನ ರೈತರು ಅತೀ ಹೆಚ್ಚು ಹಣಕ್ಕೆ ಹರಾಜು ಕೂಗಿ ದಾಖಲೆಗೆ ಪಾತ್ರರಾಗಿದ್ದರು. ಕಳೆದ ಬಾರಿ 25.42 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿಯೂ ಇಷ್ಟೇ ಅಥವಾ ಇದಕ್ಕೂ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು. 

ಕಳೆದ ವರ್ಷ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ತುಮಕೂರು ಜಿಲ್ಲೆಗಳಿಂದ ರೈತರು ಪಾಲ್ಗೊಂಡಿದ್ದರು. ಈ ಭಾಗದ ರೈತರು ಪ್ರತಿ ವರ್ಷವೂ ಹರಾಜಿನಲ್ಲಿ  ತಮಗೆ ಇಷ್ಟದ ಹೋರಿಗಳನ್ನು ಖರೀದಿಸುತ್ತಾರೆ. ಕರಿ ಹಾಯುವ ಸ್ಪರ್ಧೆ, ಜೋಡೆತ್ತಿನ ಗಾಡಿ ಸ್ಪರ್ಧೆ, ಜಾತ್ರಾ ಪ್ರದರ್ಶನ ಹಾಗೂ ಕೃಷಿ ಚಟುವಟಿಕೆಯಲ್ಲೂ ಸಾಮರ್ಥ್ಯ ತೋರಿರುವ ಅಮೃತ್ ಮಹಲ್ ಹೋರಿಗಳು ರೈತರ ಮನಗೆದ್ದಿವೆ. 

ಕಳೆದ ಬಾರಿ ಹರಾಜಿನಲ್ಲಿ 70 ಸಾವಿರ ರೂಪಾಯಿ ನೀಡಿ ಜೋಡಿ ಕರುಗಳನ್ನು ಖರೀದಿಸಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರಿ ರೈತ ವೆಂಕಪ್ಪ ಮಲಕಪ್ಪ ದೂದಿಹಳ್ಳಿ `ಹೋರಿಕರು ಚಲೋ ಆಗಿವ್ರಿ. ಕುದ್ರಿ ಕುದ್ರಿ ತರಹ ಬೆಳಿತಿವೆ. ಇನ್ನೂ ಹಲ್ಲಿಕ್ಕಿಲ್ರಿ. ಮಾರಾಟ ಮಾಡಿ, ಲಾಭ ಗಿಟ್ಸಕ್ಕೆ ಖರೀದಿ ಮಾಡಿಲ್ರಿ. ಬೆಲೆ ಕಟ್ಟೊಕು ಆಗುವಲ್ದಿರಿ. ಮಕ್ಕಳನ್ ಸಾಕ್ದಂಗೆ ಸಾಕ್ತಿವಿ~ ಎಂದರು.

ಅಷ್ಟೊಂದು ಜತನದಿಂದ ಸಾಕುತ್ತಿರುವ ಬಗ್ಗೆ ವಿಚಾರಿಸಿದಾಗ `ದೀಪಾವಳಿ ಹಬ್ಬದಾಗೆ ಕರಿ ಹಾಯ್ಸಕ್ಕೆ ಹೋರಿ ಕಟ್ಟೀನಿ. ಪ್ರತಿ ವರ್ಷ ದೀಪಾವಳಿಲಿ ನಮ್ಮೂರ ಕಡೆ ಸ್ಪರ್ಧಿ ನಡಿತೀತ್ರಿ. ಹೋರಿಗಳ ಕೊರಳು, ಸೊಂಟಕ್ಕೆ ನಾಲ್ಕರಿಂದ ಆರು ಕೆಜಿವರೆಗೆ ಕೊಬ್ರಿ ಕಟ್ತೀವ್ರಿ. ಸಾವಿರಾರು ಮಂದಿ ಅದನ್ನು ಹಿಡಿದು ಕೊಬ್ರಿ ಕೀಳೊ ಸಾಹಸ ಮಾಡ್ತಾರ‌್ರಿ. ಯಾರಾದ್ರು ಹಿಡಿದು ಕೊಬ್ಬರಿ ಕಿತ್ಕೊಂಡ್ರೆ ಹೋರಿಗೆ ಕಿಮ್ಮತ್ತಿಲ್ರಿ. ಮುಂಡ ಮೋಚ್ತು ಅಂಥ್ರಿ.

ಆಮೇಲೆ ಮಾರಬೇಕು, ಇಲ್ಲ ಅಂದ್ರಿ ಉಳಿಮೆಗೆ ಇಡ್ಕೊಬೇಕ್ರಿ. ಕರಿ ಹಾಯ್ತಾ ಓಡ್ತಿದ್ರೆ ಯಾರಾದ್ರು ಹಿಡಿಯಕ್ಕೆ ಬಂದ್ರೆ ಗುದ್ದಿ, ಹಾಯ್ದು, ಕೆಡವಿ, ಯಾರ್ ಕೈಗೆ ಸಿಕ್ದೆ ನುಣಿಚಿಕೊಂಡು ಬಂದ್ರೆ ಅದಕ್ಕೆ ಆನೆ ಬೆಲೆ ಬಂತು. ಅಂತಹ ಹೋರಿಗಳನ್ನು ಬೀಜಕ್ಕೆ ಇಟ್ಕೊತೀವ್ರಿ. ಐದು ಗ್ರಾಂ ಬಂಗಾರ, 5 ಟಿವಿ. ಬೈಕ್, ಕಾರು ಬಹುಮಾನ ಕೊಡ್ತಾರ‌್ರಿ. ಹೋರಿ ಕಟ್ಟಿದ್ಕು ಸಾರ್ಥಕತೆ ಬರುತ್ರೀ. ಸೋತ್ವೊ ಮತ್ತೆ ಅಮೃತ್ ಮಹಲ್ ಕಾವಲ್ ಕಡಿ ಹೊಸ ಹೋರಿ ಹಿಡಿಯಕ್ ಮುಖ ಮಾಡಬೇಕ್ರಿ~ ಎಂದು ಗುಟ್ಟು ಬಿಟ್ಟುಕೊಟ್ಟರು.

ರಾಜ್ಯದ ದಾಖಲೆಗಳಲ್ಲಿ 72 ಅಮೃತ ಮಹಲ್ ಕಾವಲುಗಳಲ್ಲಿವೆ. ಆದರೆ, ಇದರಲ್ಲಿ ಬಹುತೇಕ ಕಾವಲುಗಳು ಒತ್ತುವರಿ ಮತ್ತು ಅನ್ಯ ಉದ್ದೇಶಗಳಿಗೆ ಪರಭಾರೆಯಾಗಿವೆ. ಅಳಿದುಳಿದಿರುವ ಕಾವಲುಗಳಲ್ಲಿ ಸುಮಾರು 1362 ಅಮೃತ ಮಹಲ್ ರಾಸುಗಳಿವೆ. ರಾಸುಗಳ ಸಾವಿನ ಸಂಖ್ಯೆ ಶೇ.5ಕ್ಕಿಂತ ಕಡಿವೆು ಇದೆ. ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಕೇಂದ್ರದಲ್ಲಿ ಎರಡು ಕರುಗಳು ಮತ್ತು ಅರಸೀಕೆರೆ ತಾಲ್ಲೂಕಿನ ಅಬ್ಬನಘಟ್ಟ ಕಾವಲ್‌ನಲ್ಲಿ 2 ಕರುಗಳು ಈ ಬಾರಿ ಚಿರತೆ ದಾಳಿಗೆ ತುತ್ತಾಗಿವೆ. ಇದನ್ನು ಹೊರತುಪಡಿಸಿದರೆ ಉಳಿದವು ಕಾಯಿಲೆ ಮತ್ತು ಮುದಿತನದಿಂದ ಅಸುನೀಗಿರುವುದು ಕಂಡುಬಂದಿದೆ ಇಲಾಖೆ ಅಂಕಿಅಂಶಗಳಿಂದ.

ಈ ಬಾರಿ ಬಹುತೇಕ ಕಾವಲ್‌ಗಳು ಬರದ ಸ್ಥಿತಿಗೆ ತುತ್ತಾಗಿದ್ದು, ರಾಸುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ. ಬಾಸೂರು, ಕೊನೆಹಳ್ಳಿ ಸೇರಿದಂತೆ ಬಹುತೇಕ ಅಮೃತ್ ಮಹಲ್ ಕಾವಲುಗಳಲ್ಲಿ ಕೃಷ್ಣ ಮೃಗಗಳು ಆಹಾರ ಕೊರತೆ ಎದುರಿಸುತ್ತಿವೆ. ಚಿತ್ರದುರ್ಗ ತಾಲ್ಲೂಕಿನ ಎರಡುಗುಡ್ಡ ಕಾವಲ್, ಬಲ್ಲಾಳರಾಯದುರ್ಗ ಮತ್ತು ತಂಗವಳ್ಳಿ ತೊರೆ ಕಾವಲ್, ತಿಪಟೂರಿನ ಹುಲ್ಲೇನಹಳ್ಳಿ ಕಾವಲಿನಲ್ಲಿ ವನ್ಯಜೀವಿಗಳ ಬೇಟೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎನ್ನುತ್ತವೆ ಪಶು ಸಂಗೋಪನಾ ಇಲಾಖೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.