ADVERTISEMENT

ಅರಸು ಕನಸು ನನಸು ಮಾಡಲು ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 8:15 IST
Last Updated 21 ಆಗಸ್ಟ್ 2012, 8:15 IST

ಚಿಕ್ಕಮಗಳೂರು:  ದೇವರಾಜು ಅರಸು ಹಿಂದು ಳಿದ ವರ್ಗದ ಮಹಾನ್ ಚೇತನ. ಹಿಂದುಳಿದ ವರ್ಗಕ್ಕೆ ನ್ಯಾಯ ದೊರಕಿಸಿಕೊಟ್ಟ ಪರಿವರ್ತ ನೆಯ ಹರಿಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 97ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅರಸು ರಾಜ್ಯದಲ್ಲಿ ಮರೆಯದಿರುವ ಇತಿಹಾಸ ನಿರ್ಮಿಸಿದ್ದಾರೆ. ವಿವಿಧ ಇಲಾಖೆಗಳನ್ನು ಸಮರ್ಥ ವಾಗಿ ನಿಭಾಯಿಸಿ, ನಂತರ ಮುಖ್ಯಮಂತ್ರಿಯಾಗಿ ರಾಜ್ಯ ಆಳಿದರು. ಗಟ್ಟಿ ನಿರ್ಧಾರ ಕೈಗೊಂಡು ಉಳುವವನೆ ಭೂ ಒಡೆಯ ಕಾನೂನು ಸಮರ್ಪಕವಾಗಿ ರಾಜ್ಯದಲ್ಲಿ ಜಾರಿಗೊಳಿಸಿದರು ಎಂದು ಶ್ಲಾಘಿಸಿದರು.

ಶಕ್ತಿಶಾಲಿ, ಬಲಾಢ್ಯ ಮುಖ್ಯಮಂತ್ರಿಯಾಗಿ, ರಾಜಕೀಯ ವ್ಯವಸ್ಥೆ ಸರಿಪಡಿಸಿ ದ ಗರಿಮೆ ಅವರದು. ಅರಸು ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗದ ಇಲಾಖೆಗೆ ಸರ್ಕಾರ ಸಚಿವಾಲಯವನ್ನೇ ತೆರೆದಿದೆ ಎಂದು ತಿಳಿಸಿದರು.

ಕಳೆದ ವರ್ಷದ ಬಜೆಟ್‌ನಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗಾಗಿ 50 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಈ ವರ್ಷವೂ 50 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಮೂರು ಚರ್ಚ್‌ಗಳ ಅಭಿವೃದ್ಧಿಗೆ 21 ಲಕ್ಷ ರೂಪಾಯಿ ನೆರವು ನೀಡಲಾಗುತ್ತಿದೆ. ದೇವರಾಜ ಅರಸು ಅವರು ರಾಜ್ಯದಲ್ಲಿ ನೆಟ್ಟ ಬೀಜಕ್ಕೆ ಸರ್ಕಾರ ನೀರೆರೆದು ಸದೃಢಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಜಾತಿ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ, ಸಮಾನತೆ ಇದೆ ಎನ್ನುತ್ತಾರೆ. ಆದರೆ, ಜಾತಿಯ ಭೂತ ಬೆನ್ನತ್ತಿದ್ದಂತೆ ಕಾಣುತ್ತಿದೆ. ಜಾತಿ ಬೆಂಬಲ ನೋಡಿ ವ್ಯಕ್ತಿಯ ವ್ಯಕ್ತಿತ್ವ ಅಳೆಯುವ ಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ವರ್ಗದವರಿಗೆ ಮೋಸ ಮಾಡುವ ಸಂಚುಗಳು ನಡೆಯುತ್ತಿವೆ. ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.

ಶೋಷಿತ ವರ್ಗದವರು ಇಂದಿನ ವ್ಯವಸ್ಥೆ ಗಮನಿಸುತ್ತಾ ಜಾಗೃತರಾಗಬೇಕು. ಇಲ್ಲದಿದ್ದರೆ ಈ ವ್ಯವಸ್ಥೆಯೊಂದಿಗೆ ಕೊಚ್ಚಿ ಹೋಗಬೇಕಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದವರು ನ್ಯಾಯ ಕೇಳಿದರೆ ಮೇಲ್ವರ್ಗದವರು ಬೇಸರಪಡುತ್ತಾರೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಗಟ್ಟಿಯಾಗಿರುತ್ತದೆಯೋ ಅಲ್ಲಿಯವರೆಗೆ ಸಾಮಾಜಿಕ ನ್ಯಾಯ ಕೇಳಲೇಬೇಕಾಗುತ್ತದೆ ಎಂದರು.

ಸಮಾನತೆ, ಸಾಮಾಜಿಕ ನ್ಯಾಯಗಳು ಚರಿತ್ರೆಯಲ್ಲಿ ಉಳಿದುಹೋಗಿವೆ. ದೇವರಾಜ ಅರಸು ಅವರ ಕನಸು ಸಂಪೂರ್ಣ ಜಾರಿಯಾಗಿಲ್ಲ. ಅದನ್ನು ಜಾರಿಗೊಳಿಸಬೇಕಾದ ಅಗತ್ಯತೆ ಇದೆ. ಸಮಾಜದಲ್ಲಿ ಹೊಸ ಚಿಂತನೆಗಳು ಮೂಡಬೇಕಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ದೇವರಾಜು ಅರಸು ಅವರು ಶೋಷಿತರ ಬಗ್ಗೆ ಕಳಕಳಿ ಹೊಂದಿದ್ದರಿಂದ ಆಡಳಿತದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಚಿತಾ ನರೇಂದ್ರ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪದ್ಮಾಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಜಿ.ಪ. ಸದಸ್ಯರಾದ ಹೇಮಾವತಿ ಕೃಷ್ಣಪ್ಪ, ನಿರಂಜನ, ಜಿಲ್ಲಾಧಿಕಾರಿ ರಂಗಸ್ವಾಮಿ, ಜಿಲ್ಲಾ ಪೊಲೀಸ್‌ಮುಖ್ಯಾಧಿಕಾರಿ ಶಶಿಕುಮಾರ್, ಉಪವಿಭಾಗಾಧಿಕಾರಿ ಡಾ.ಪ್ರಶಾಂತ್, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಹಿಂದುಳಿದ ವರ್ಗದ ಮುಖಂಡ ವರಸಿದ್ದಿವೇಣುಗೋಪಾಲ್, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಕೆ.ಜಗದೀಶ ಕುಮಾರ್ ಹಾಜರಿದ್ದರು.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.