ADVERTISEMENT

ಆಂಗ್ಲ ನಾಮಫಲಕ ವಿರೋಧಿಸಿ ಕನ್ನಡ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 9:38 IST
Last Updated 18 ಜುಲೈ 2013, 9:38 IST

ಚಿಕ್ಕಮಗಳೂರು: ನಗರದ ವಿವಿಧೆಡೆ ಕನ್ನಡ ನಿರ್ಲಕ್ಷಿಸಿ ಆಂಗ್ಲ ಭಾಷೆಗೆ ಆದ್ಯತೆ ನೀಡಿ ಹಾಕಿದ್ದ ನಾಮಫಲಕ, ಫ್ಲೆಕ್ಸ್ ಹಾಗೂ ಜಾಹೀರಾತು ಫಲಕಗಳನ್ನು ಹರಿದು ಹಾಕಿ ಜಿಲ್ಲಾ ಕನ್ನಡ ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ವಿವಿಧೆಡೆ ಆಂಗ್ಲ ಭಾಷೆಯ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಂ.ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಕನ್ನಡ ವಿರೋಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಕೆಲವು ಅಂಗಡಿಗಳಲ್ಲಿ ಇಂಗ್ಲಿಷ್‌ನಲ್ಲಿ ಹಾಕಿದ್ದ ನಾಮಫಲಕಗಳನ್ನು ಹರಿದು ಹಾಕಿದರು.

ಸೇನೆಯ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, ಈ ನೆಲ, ಜಲದಲ್ಲಿ ಜೀವಿಸುತ್ತಿರುವ ಜನರಿಗೆ ಕನ್ನಡದ ಬಗ್ಗೆ ತಾತ್ಸರ ಮನೋಭಾವ ಏಕೆ? ಎಂದು ಕಿಡಿಕಾರಿದರು.

ಈ ಹಿಂದೆಯೇ ಹಲವು ಬಾರಿ ಅಂಗಡಿ ಮತ್ತು ಬ್ಯಾಂಕ್‌ಗಳಿಗೆ ಕನ್ನಡ ಭಾಷೆ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ, ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಅಂಗಡಿಗಳಿಗೆ ಮುಂದಿನ 15 ದಿನಗಳ ಗಡುವು ನೀಡಲಾಗಿದೆ. ಕನ್ನಡ ನಾಮಫಲಕಕ್ಕೆ ಆದ್ಯತೆ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಂಗಡಿ ಮಾಲೀಕರೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು. ಉಪಾಧ್ಯಕ್ಷ ಕೃಷಪ್ಪ, ನಗರಾಧ್ಯಕ್ಷ ಪ್ರವೀಣ್, ದೇವರಾಜ್, ನಿಲೇಶ್, ರಂಜಿತ್, ಹೇಮಂತ್ ರಾಜು ಇತರರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.