ADVERTISEMENT

ಆಕಸ್ಮಿಕ ಬೆಂಕಿ ಅವಘಡ: ಮನೆ ನಾಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2015, 5:14 IST
Last Updated 25 ಫೆಬ್ರುವರಿ 2015, 5:14 IST

ಹಾತೂರು(ಎನ್.ಆರ್.ಪುರ): ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾತೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಆಕಸ್ಮಿಕ ಬೆಂಕಿಯಿಂದ ಮನೆ ಸಂಪೂರ್ಣವಾಗಿ ಸುಟ್ಟು ₨ 28 ಲಕ್ಷ ನಷ್ಟವುಂಟಾಗಿರುವ ಘಟನೆ ನಡೆದಿದೆ.

ಘಟನೆ ವಿವರ:  ತಾಲ್ಲೂಕಿನ ಹಾತೂರು ಗ್ರಾಮದ ಕಸ್ತೂರಿಯಮ್ಮ ಅವರ ಮನೆ ಹಿಂಭಾಗದಲ್ಲಿ ರಾತ್ರಿ 10.30ರ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ಮಲಗಿದ್ದವರಿಗೆ ಆ ಸಮಯದಲ್ಲಿ ಎಚ್ಚರವಾಗಿದ್ದು ಕೂಡಲೇ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು, ಪ್ರಯೋಜನವಾಗಲಿಲ್ಲ.

ಗ್ರಾಮಸ್ಥರೆಲ್ಲಾ ಸೇರಿಕೊಂಡು ಮನೆಯ ಸಾಮಾನುಗಳನ್ನು ಹೊರಹಾಕಿ ಬೆಂಕಿ ನಂದಿಸುವ ಪ್ರಯತ್ನ ಮುಂದುವರೆಸಿದರು. ಕೂಡಲೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದರೂ ಇಲಾಖೆ ಯವರು ಬರುವ ವೇಳೆಗೆ ಮನೆ ಸಂಪೂರ್ಣ ಸುಟ್ಟುಭಸ್ಮವಾಗಿತ್ತು.

ಬೆಂಕಿಯ ಕೆನ್ನಾಲಗೆಗೆ ಮನೆಯಲ್ಲಿದ್ದ ಎರಡು ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡವು. ಇದರ ಪರಿಣಾಮ ಮನೆಯ ಮೇಲ್ಛಾವಣಿ , ಹೆಂಚುಗಳು ಪುಡಿಯಾಗಿವೆ. ಮನೆಯೊಳಗಿದ್ದ 25 ಕ್ವಿಂಟಾಲ್ ಅಡಿಕೆ, 20 ಕ್ವಿಂಟಾಲ್ ಚಿಪ್ಪೆಗೋಟು, 7.50 ಕ್ವಿಂಟಾಲ್ ಕಾಫಿ,  ಟಿ.ವಿ, ಲ್ಯಾಪ್ ಟಾಪ್, ಗ್ರೈಂಡರ್, ಫ್ರಿಜ್, ಬೆಳ್ಳಿ, ಬಂಗಾರ, ಪಾತ್ರೆಗಳೆಲ್ಲವೂ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ  ಸುಮಾರು ₨28ಲಕ್ಷ ನಷ್ಟದ ಅಂದಾಜು ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಬೆಂಕಿಯಿಂದ ಸಾಕಷ್ಟು ನಷ್ಟವಾಗಿರುವುದರಿಂದ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಅವರ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ತಹಶೀಲ್ದಾರ್ ಎಂ.ಲೋಕೇಶಪ್ಪ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷೆ ಎಚ್.ಟಿ.ರಾಜೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಅಗ್ನಿಶಾಮಕ ಇಲಾಖೆಯ ಬಗ್ಗೆ ಗ್ರಾಮಸ್ಥರ ಆಕ್ರೋಶ : ಆಕಸ್ಮಿಕ ಬೆಂಕಿಯಿಂದ ಅನಾಹುತವಾದ ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆಯವರು ವಾಹನದಲ್ಲಿ ನೀರನ್ನು  ಪೂರ್ಣ ಭರ್ತಿ ಮಾಡಿಕೊಂಡು ಬಾರದೇ ಇದುದ್ದರಿಂದ ಬೆಂಕಿ ನಂದಿಸುವ ವೇಳೆ ನೀರು ಖಾಲಿಯಾಯಿತು. ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡುವಂತೆ ಕೇಳಿದರು ಎಂದು ಗ್ರಾಮಸ್ಥರು ಆರೋಪಿಸಿದರು. ಈ ರೀತಿಯ ಅಗ್ನಿಶಾಮಕ ಸೇವೆಯಿಂದ ಯಾವುದೇ ಪ್ರಯೋಜವಾಗುವುದಿಲ್ಲ. ಸಂಬಂಧಪಟ್ಟವರು ವಾಹನದಲ್ಲಿ ಯಾವಾಗಲೂ ಪೂರ್ಣ ನೀರಿರುವಂತಹ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.