ADVERTISEMENT

ಆಕೇಶಿಯಾ ಮಣ್ಣುಪಾಲು: ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:01 IST
Last Updated 5 ಏಪ್ರಿಲ್ 2013, 9:01 IST

ಬಾಳೆಹೊನ್ನೂರು:  ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ  ಕೋಟ್ಯಂತರ  ಮೌಲ್ಯ ದ ಆಕೇಶಿಯಾ ಮರದ ತುಂಡುಗಳು ಮಣ್ಣುಪಾಲಾಗುತ್ತಿವೆ ಎಂದು ಪ್ರಜಾಪ್ರಭುತ್ವ ಉಳಿಸಿ ಅಂದೋಲನ ವೇದಿಕೆಯ ಸುಮಾನಾಗೇಶ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಕೊಪ್ಪ ಮತ್ತು ಮೂಡಿಗೆರೆ  ತಾಲ್ಲೂಕಿನ ಗಡಿ ಬಾಗದಲ್ಲಿರುವ  ತನೂಡಿ ಗ್ರಾಮದಲ್ಲಿ ಕಳೆದ ಮೂರು ವರ್ಷದ ಹಿಂದೆ ಆಕೇಶಿಯಾ ಮರಗಳನ್ನು ಕಡಿಯಲು ಪೂರ್ಣ ಬಿಲ್ ಮಾಡಿಸಿ ಕಟಾವು ಮಾಡಲಾಗಿದೆ.

ಆದರೆ ಕಡಿದ ಮರಗಳಲ್ಲಿ ಕೇವಲ ಶೇ60 ರಷ್ಟು ಮರಗಳನ್ನು ಮಾತ್ರ ಇಲಾಖೆ ಬೇರೆ ಕಡೆಗೆ ಸಾಗಿಸಿ ಉಳಿದ ಶೇ 40ರಷ್ಟು ಮರಗಳನ್ನು ಸ್ಥಳದಲ್ಲೇ ಬಿಡಲಾಗಿದೆ. ಇದರ ಪರಿಣಾಮ ಕೋಟ್ಯಂತರ ಮೌಲ್ಯದ ಆಕೇಶಿಯಾ ಮರ ಮಣ್ಣು ಪಾಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಮಣ್ಣು ಪಾಲಾಗುವ ಮರಗಳನ್ನು ಇಲಾಖೆ ಉರುವಲಾಗಿ ಬಳಸಬಹುದು. ಆದರೆ ಅಧಿಕಾರಿಗಳಲ್ಲಿನ ದೂರದರ್ಶಿತ್ವದ ಕೊರತೆಯಿಂದಾಗಿ ಕಾಡಿನ ಅಮೂಲ್ಯ ಸಂಪತ್ತು ನಾಶವಾಗುತ್ತಿದೆ.  ಒಂದಡೆ ವಿಶ್ವ ಬ್ಯಾಂಕಿನಿಂದ ಸಾಲ ಪಡೆದು ಅರಣ್ಯ ಅಭಿವೃದ್ಧಿ ಮಾಡುವ ಇಲಾಖೆ ಯೋಜನೆ ನಿಷ್ಪ್ರಯೋಜಕವಾಗಿದೆ.

ರಾಜ್ಯ ಸರ್ಕಾರ ಎರುಡು ವರ್ಷದ ಹಿಂದೆ ಆಕೇಶಿಯಾ ಬೆಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಇಲಾಖೆ  ನೂರಾರು ಎಕರೆ ಗೋಮಾಳ ಪ್ರದೇಶದಲ್ಲಿ  ಕದ್ದು ಮುಚ್ಚಿ ಅಕೇಶಿಯಾ ಗಿಡವನ್ನು  ನೆಡುವ ಕಾರ್ಯ ಮುಂದು ವರೆಸಿದ್ದಾರೆ. ಬಡ ಹರಿಜನ, ಗಿರಿಜನರು ಸಾಕುತ್ತಿರುವ ಜಾನುವಾರು ಗಳು ಆಕೇಶಿಯಾ ತೋಪಿನೊಳಗೆ ಹೋದಲ್ಲಿ  ಅಧಿಕಾರಿಗಳು ಅವುಗಳನ್ನು ಹಿಡಿದು ಹೊರಗೆ ಸಾಗಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಒತ್ತಾಸೆಯಿಂದಾಗಿ ಗೋಮಾಳ ಜಾಗ ಕಬಳಿಕೆಯಾಗುತ್ತಿದ್ದು ಪ್ರಾಣಿಗಳಿಗೆ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ  ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT