ADVERTISEMENT

ಆಜಾದ್ ಪಾರ್ಕ್‌ ಶಾಲೆಯಲ್ಲಿ ಹುಲಿ, ಜಿಂಕೆ!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:38 IST
Last Updated 10 ಡಿಸೆಂಬರ್ 2013, 8:38 IST

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ಕನ್ನಡ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಹುಲಿ, ಜಿಂಕೆ, ಇರುವೆ, ಹುತ್ತದಲ್ಲಿ ನಾಗರಹಾವು, ಮೊಸಳೆಗಳು...

ಈ ಪ್ರಾಣಿಗಳು ಶಾಲೆ ಆವರಣಕ್ಕೆ ಬಂದಿವೆಯೇ? ಎಂದು ಹುಬ್ಬೇರಿ ಸಬೇಡಿ, ಚಿಕ್ಕಮಗಳೂರು ನಗರ–2 ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣ್ಣಿನ (ಕ್ಲೇ) ಮಾದರಿ ತಯಾರಿಕೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಮೂಡಿ ಬಂದಿರುವ ಪ್ರಾಣಿಗಳು ಇವು.
ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಜೇಡಿ ಮಣ್ಣನ್ನು ತಂದಿಟ್ಟುಕೊಂಡಿರುವ ವಿದ್ಯಾರ್ಥಿಗಳು ತಮಗೆ ತೋಚಿದ ಮಣ್ಣಿನಲ್ಲಿ ವಿವಿಧ ಪ್ರಾಣಿ ಪಕ್ಷಿಗಳಿಗೆ ರೂಪ ಕೊಡುತ್ತಿದ್ದರೆ, ಮತ್ತೆ ಕೆಲವರು ತದೇಕ ಚಿತ್ತದಿಂದ ಅವುಗಳಿಗೆ ಬಣ್ಣ ಬಳಿಯುತ್ತಿರುವುದು ಕಂಡುಬಂತು.

ಟೌನ್ ಮಹಿಳಾ ಸಮಾಜದ ವಿದ್ಯಾರ್ಥಿ ಅಲೋಕ್ ಕೈಯಲ್ಲಿ ಹುಲಿ ಮೂಡಿ ಬಂದರೆ, ಗವನಹಳ್ಳಿಯ ಶಾಲೆಯ ಮಂಜುನಾಥ ಜಿಂಕೆಯನ್ನು, ಗುಡ್ ಸಫರ್ಡ್ ಶಾಲೆಯ ಪ್ರಶಾಂತ್ ಹುತ್ತದೊಳಗೆ ನಾಗರಹಾವು ಸೇರಿಕೊ ಳ್ಳುತ್ತಿರುವುದು, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಕೆ.ಎಸ್. ಸಿಂಚನಾ ಕೈಯಲ್ಲಿ ಇರುವೆ ಮೂಡಿ ಬಂದಿದೆ.

ಈ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ 23 ಶಾಲೆಗಳಿಂದ 900 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದ ಶಾಲೆಯ ಮುಖ್ಯೋಪಾಧ್ಯಾಯ ಲೋಕೇಶ್ವರಾಚಾರ್, ಒಟ್ಟು 16 ಸ್ಪರ್ಧೆಗಳಿಗೂ ಪ್ರತ್ಯೇಕ ಒಂದೊಂದು ವೇದಿಕೆ ನಿರ್ಮಿಸಲಾಗಿದೆ ಎಂದರು.
ಕನ್ನಡ ಕಂಠ ಪಾಠ ಸ್ಪರ್ಧೆಗೆ ಕುವೆಂಪು ವೇದಿಕೆ, ಆಂಗ್ಲ ಭಾಷಾ ಕಂಠ ಪಾಠಕ್ಕೆ ಷೇಕ್ಸ್ ಪಿಯರ್, ಹಿಂದಿಗೆ ತುಳಿಸಿದಾಸ್, ಸಂಸ್ಕೃತ ಧಾರ್ಮಿಕ ಪಠಣಕ್ಕೆ ಕೃಷ್ಣ, ಅರೇಬಿಕಾ ಧಾರ್ಮಿಕ ಪಠಣಕ್ಕೆ ನಿಸಾರ್ ಅಹಮದ್, ಲಘು ಸಂಗೀತಕ್ಕೆ ಗಂಗೂಬಾಯಿ ಹಾನಗಲ್,

ಛದ್ಮವೇಷಕ್ಕೆ ಸ್ವಾಮಿ ವಿವೇಕಾನಂದ, ಚಿತ್ರಕಲೆಗೆ ರವಿವರ್ಮ ವೇದಿಕೆ, ಕಥೆ ಹೇಳುವುದಕ್ಕೆ ವೇದವ್ಯಾಸ, ಅಭಿನಯ ಗೀತೆಗೆ ನಟರಾಜ, ಕ್ಲೈ ಮಾದರಿಗೆ ಅಮರಶಿಲ್ಪಿ ಜಕಣಚಾರಿ, ಯೋಗಾಸನಕ್ಕೆ ಪತಂಜಲಿ ಮಹರ್ಷಿ, ಜಾನಪದ ನೃತ್ಯಕ್ಕೆ ಕೆ.ಆರ್.ಲಿಂಗಪ್ಪ, ದೇಶ ಭಕ್ತಿಗೀತೆಗೆ ಸುಭಾಷ್ ಚಂದ್ರಬೋಸ್, ಕೋಲಾಟಕ್ಕೆ ಕರೀಂಖಾನ್, ರಸಪ್ರಶ್ನೆಗೆ ಸಿ.ಎನ್.ಆರ್.ರಾವ್ ವೇದಿಕೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.