ಚಿಕ್ಕಮಗಳೂರು: ಮಣಿಪಾಲದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ, ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹಳೆಯ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ನೂರಾರು ವಿದ್ಯಾರ್ಥಿಗಳು, ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟುವಲ್ಲಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಘದ ಅಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿ, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿನಿಯ ಮೇಲೆ ನಡೆಸಿರುವ ಸಾಮೂಹಿಕ ಅತ್ಯಾಚಾರದ ಆರೋಪಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಶಾಲಾ, ಕಾಲೇಜುಗಳನ್ನು ಬಂದ್‌ಗೊಳಿಸಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿನಿ ಸಿಂಚನಾ ಮಾತನಾಡಿ,ಅತ್ಯಾಚಾರ ಪ್ರಕರಣ ಮರುಕಳಿಸದಂತೆ ಕಡಿವಾಣಹಾಕ ಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಬಸ್ ಪ್ರಯಾಣ ದರವನ್ನು ಇಳಿಸಬೇಕು. ಒಂದನೆಯ ತರಗತಿಯಿಂದ ಪಿಯುಸಿವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಪಠ್ಯಪುಸ್ತಕಗಳನ್ನು ವಿತರಿಸಬೇಕು. ಶಾಲಾ, ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಿ, ಶಾಲಾ, ಕಾಲೇಜು ಹಾಸ್ಟೆಲ್‌ಗಳಿಗೆ ಮೂಲಸೌಕರ್ಯ ಒದಗಿಸಬೇಕು. ನಗರದಲ್ಲಿ ಪ್ರತ್ಯೇಕ ಮಹಿಳಾ ಕಾಲೇಜು ಆರಂಭಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿ ವೇತನ ಹೆಚ್ಚಿಸುವುದು, ವಿವಿಧ ಶಾಲಾ, ಕಾಲೇಜುಗಳಲ್ಲಿ ಕೊರತೆ ಇರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸಬೇಕು. ಖಾಸಗಿ ವಿಶ್ವ ವಿದ್ಯಾನಿಲಯವನ್ನು ರದ್ದುಪಡಿಸಿ, ವಿದ್ಯಾರ್ಥಿನಿಲಯಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಲಾಯಿತು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ಮಹೇಶ್, ತಾಲ್ಲೂಕು ಅಧ್ಯಕ್ಷ ಅಪ್ಪು, ಜಿಲ್ಲಾ ಸಮಿತಿ ಸದಸ್ಯರಾದ ಲತಾ, ಕೆ.ಎಲ್.ಕಾವ್ಯಾ, ಮಂಜುನಾಥ, ಕೃಪಾ, ಕೃತ್ತಿಕಾ, ಕಾವ್ಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.