ADVERTISEMENT

ಆಶ್ರಯ ಮನೆ– ಸಿಗುತ್ತಿಲ್ಲ ಮರಳು

ಜಿನೇಶ್ ಇರ್ವತ್ತೂರು
Published 15 ನವೆಂಬರ್ 2017, 6:55 IST
Last Updated 15 ನವೆಂಬರ್ 2017, 6:55 IST
ಕೊಪ್ಪ ತಾಲ್ಲೂಕಿನ ಚಾವಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಹಕ್ಲು ಕ್ವಾರಿಯಲ್ಲಿ ಸಂಗ್ರಹಿಸಿರುವ ತುಂಗಾನದಿಯ ಮರಳು ರಾಶಿ.
ಕೊಪ್ಪ ತಾಲ್ಲೂಕಿನ ಚಾವಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಹಕ್ಲು ಕ್ವಾರಿಯಲ್ಲಿ ಸಂಗ್ರಹಿಸಿರುವ ತುಂಗಾನದಿಯ ಮರಳು ರಾಶಿ.   

ಕೊಪ್ಪ: ತಾಲ್ಲೂಕಿನ ಚಾವಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಗಾ ನದಿಯಿಂದ ಸಂಗ್ರಹಿಸಿದ ಮುಳ್ಳುಹಕ್ಲು ಕ್ವಾರಿಯ ಮರಳನ್ನು ಸಾರ್ವಜನಿಕರಿಗೆ ವಿತರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಕ್ವಾರಿಯ ಮರಳು ಸಂಗ್ರಹಣೆ ಗುತ್ತಿಗೆಯನ್ನು ಅಂಗವಿಕಲರ ಕೋಟಾದಡಿ ಅಬೂಬಕರ್ ಅವರಿಗೆ ಕಳೆದ ಮಳೆಗಾಲಕ್ಕೆ ಮುಂಚೆಯೇ ವಹಿಸಿದ್ದರೂ, ವರ್ಕ್ ಆರ್ಡರ್ ನೀಡುವ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯ ಬೇಕಿದ್ದ ಮರಳು ನಿರ್ವಹಣಾ ಸಮಿತಿ ಸಭೆ (ಇಸಿ ಮೀಟಿಂಗ್) ಪದೇ ಪದೇ ಮುಂದೂಡಲ್ಪಟ್ಟಿದ್ದರಿಂದ ತೀರಾ ವಿಳಂಬಗೊಂಡು ಕಳೆದ ಅಕ್ಟೋಬರ್ 25ಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ.

ತುಂಗಾನದಿಯಿಂದ ಸಂಗ್ರಹಿಸಿದ 1000 ಲೋಡ್‌ನಷ್ಟು ಮರಳನ್ನು ಮುಳ್ಳುಹಕ್ಲು ಯಾರ್ಡ್‌ನಲ್ಲಿ ದಾಸ್ತಾನು ಮಾಡಲಾಗಿದ್ದು, ಸಭೆ ಮತ್ತೆ ಮುಂದೂಡಿದ್ದರಿಂದ ಮರಳು ವಿತರ ಣೆಗೆ ಅಡ್ಡಿಯಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ. ಇದು ಅಕ್ರಮ ಮರಳು ದಂಧೆಗೆ ಎಡೆ ಮಾಡಿಕೊಟ್ಟಿದ್ದು, ಇದರ ಹಿಂದೆ ಮರಳು ಮಾಫಿಯಾದ ನಂಟು ಹೊಂದಿರುವ ರಾಜಕಾರಣಿಗಳ ಕೈವಾಡ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಗ್ರಾಮದ ನಡುವೆ ಹರಿಯುವ ತುಂಗಾನದಿಯಲ್ಲಿ ಹೇರಳ ಮರಳಿ ದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಬಡವರು ಆಶ್ರಯ ಮನೆ ಕಟ್ಟಲು ಪರದಾಡಬೇಕಾಗಿದೆ. ಮರ ಳಿನ ಕೊರತೆಯಿಂದಾಗಿ ಸರ್ಕಾರಿ ಕಾಮಗಾರಿ ಗಳನ್ನು ನಡೆಸಲಾಗದೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಮರಳು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಬೊಮ್ಲಾಪುರ, ಅಡ್ಡಗದ್ದೆ ಮತ್ತು ಮೂಡಿಗೆರೆ ತಾಲ್ಲೂಕಿನ ಹುದ್ಸೆ ಮರಳು ಕ್ವಾರಿಗಳಿಗೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯೋಗ್ಯತಾ ಪಟ್ಟಿ (ಎಲಿಜಿಬಲ್ ಲಿಸ್ಟ್) ಪ್ರಕಟಿಸದ ಕಾರಣ ಮರಳು ವಿತರಣೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಮರಳು ಸಮಿತಿ ಸಭೆಯನ್ನು ನಿಯಮಿತವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ನಿಧಾನಗತಿ ಧೋರಣೆ ಬಗ್ಗೆ ಸರ್ಕಾರಕ್ಕೆ ಬಂದಿರುವ ದೂರುಗಳ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಮರಳು ನಿರ್ವಹಣಾ ಸಮಿತಿಯ ಹೊಣೆಯನ್ನು ಜಿಲ್ಲಾಧಿಕಾರಿಗಳ ಬದಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವಹಿಸುವ ಆಸಕ್ತಿ ಹೊಂದಿದ್ದಾರೆ ಎಂಬುದು ಜನರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.