ADVERTISEMENT

ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 8:40 IST
Last Updated 4 ಜುಲೈ 2012, 8:40 IST

ಕಡೂರು: ಸಾರ್ವಜನಿಕ ಆಸ್ಪತ್ರೆಯಲ್ಲಿನ ಕುಂದುಕೊರತೆ ಬಗ್ಗೆ ಗಮನ ಹರಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರದ ಗಮನ ಸೆಳೆದು ಅಭಿವೃದ್ಧಿಗೆ ಶ್ರಮಿಸು ವುದಾಗಿ  ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಸಭಾಂ ಗಣದಲ್ಲಿ ಮಂಗಳವಾರ  ಏರ್ಪಡಿಸಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಸ್ಪತ್ರೆಗೆ ವಾರ್ಷಿಕ 18.80 ಲಕ್ಷ ರೂಗಳ ಔಷಧಿ ಬರುತ್ತಿದ್ದು, ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನೂ 10 ಲಕ್ಷ ರೂಗಳ ಔಷಧಿಗೆ ಅನುದಾನ ನೀಡಲು ಬೇಡಿಕೆ ಇಡಲಾಯಿತು. ಶಸ್ತ್ರಚಿಕಿತ್ಸೆ ಕೊಠಡಿ ಸಂಪೂರ್ಣ ಹವಾ ನಿಯಂತ್ರಣ ಮಾಡಲು ಉಪಕರಣ ಅಳವಡಿಸಬೇಕು, ಹೆಚ್ಚುವರಿಯಾಗಿ ಅಂಬುಲೆನ್ಸ್ , ಗ್ರಾಮೀಣ ಪ್ರದೇಶಕ್ಕೆ 108 ವಾಹನದ ಅವಶ್ಯಕತೆ ಇರುವುದಾಗಿ  ಡಾ.ಪರಪ್ಪ ಸಭೆಯ ಗಮನ ಸೆಳೆದರು.

ಆಸ್ಪತ್ರೆಯು  100 ಹಾಸಿಗೆಯಿಂದ ಕೂಡಿದ್ದು, ಗ್ರಾಮೀಣ ಪ್ರದೇಶ, ಅಕ್ಕ ಪಕ್ಕದ ತಾಲ್ಲೂಕುಗಳಾದ ಅರಸೀಕೆರೆ, ಹೊಸದುರ್ಗ, ತರೀಕೆರೆ ಭಾಗಗಳಿಂದ ಶಸ್ತ್ರಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದು,6 ವೈದ್ಯರ ಕೊರತೆ ಇದ್ದು ಇವರಲ್ಲಿ ಮಕ್ಕಳ ತಜ್ಞರು ಸುಮಾರು ವರ್ಷಗಳಿಂದ ಇಲ್ಲದೆ ದೂರದ ಶಿವಮೊಗ್ಗ, ದಾವಣಗೆರೆಗಳಿಗೆ ತೆರಳಬೇಕಾಗಿದೆ ಎಂದು ಸದಸ್ಯರು ದೂರಿದರು.

ತಾಲ್ಲೂಕಿನಲ್ಲಿ ಬೀರೂರು, ಉಳಿಗೆರೆ ಗ್ರಾಮಗಳಲ್ಲಿ ಎರಡು ಡೆಂಗ್ಯೂ,11 ಮಲೇರಿಯ ಪ್ರಕರಣಗಳು ಪತ್ತೆಯಾಗಿದ್ದು ಡೆಂಗ್ಯೂ ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಿರುವುದಾಗಿ ಡಾ.ಪ್ರಭು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಆಸ್ಪತ್ರೆಯ ವೈದ್ಯರಾದ ಡಾ. ಸೋಮಶೇಖರ್,ಡಾ.ಶಿವಲಿಂಗಪ್ಪ, ಡಾ.ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.