ADVERTISEMENT

ಎಂಜಿನಿಯರ್ ವಿರುದ್ಧ ಶಾಸಕ ರವಿ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 11:00 IST
Last Updated 12 ಜೂನ್ 2011, 11:00 IST

ಕಡೂರು: ಅಯ್ಯನ ಕೆರೆ ಕಾಲುವೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಶನಿವಾರ ಶಾಸಕ ಸಿ.ಟಿ.ರವಿ ವೀಕ್ಷಿಸಿ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ನಾರಾಯಣ ಮತ್ತು ಗುತ್ತಿಗೆದಾರ ಎಸ್.ಎನ್.ಆರ್.ರೆಡ್ಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಯ್ಯನಕೆರೆ ಅಚ್ಚುಕಟ್ಟು ಪ್ರದೇಶದ ವಿವಿಧ ಕಾಮಗಾರಿಗಳಿಗೆ ಸುಮಾರು 9 ಕೋಟಿ ರೂಗಳ ವೆಚ್ಚದಲ್ಲಿ ಕಾಲುವೆ ದುರಸ್ತಿಗೆ ಕಾಂಕ್ರಿಟ್ ವಾಲ್ ಹಾಕಲು, ತೂಬುಗಳನ್ನು ನಿರ್ಮಿಸಲು ಹಾಗೂ ರಸ್ತೆ ತಡೆಕಾಲುವೆಗಳನ್ನು ಮಾಡಲು ಗುತ್ತಿಗೆದಾರನಿಗೆ ನೀಡಲಾಗಿತ್ತು.

ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕಾಲುವೆ ಗೋಡೆಗೆ ಮೂರು ಇಂಚು ಕಾಂಕ್ರಿಟ್ ಹಾಕುವ ಬದಲು ಒಂದೂವರೆ ಇಂಚು ಹಾಕಿ ಕಳಪೆ ಕಾಮಗಾರಿ ಮಾಡಲಾಗಿದೆ. ಅಲ್ಲಲ್ಲಿ ಕಾಂಕ್ರಿಟ್ ಕಿತ್ತು ಹೋಗಿದ್ದು, ಗುಣಮಟ್ಟ ಕಡಿಮೆ ಇರುವುದರ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಶಾಸಕರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಇಲಾಖೆಯ ಉನ್ನತಾಧಿಕಾರಿಗಳು ಬಂದು ಕಳಪೆ ಕಾಮಗಾರಿಯನ್ನು ಪರಿಶೀಲಿಸುವವರೆಗೆ ಕಾಮಗಾರಿಯನ್ನು ಮಾಡದಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸಖರಾಯಪಟ್ಟಣ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮರಡಪ್ಪ, ಎಪಿಎಂಸಿ ಸದಸ್ಯ ಲಕ್ಷ್ಮಣ ನಾಯ್ಕ, ಚಿಕ್ಕಮಗಳೂರು ತಾ.ಪಂ ಅಧ್ಯಕ್ಷ ಕನಕರಾಜು ಅರಸ್, ಮುಖಂಡರಾದ ಅನಂದ ನಾಯ್ಕ, ರಾಕೇಶ್, ರಮೇಶ್, ಹರೀಶ್ ಮತ್ತು ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.