ಬಾಳೆಹೊನ್ನೂರು: ಪಟ್ಟಣದ ಸುತ್ತಮುತ್ತ ಕಳೆದ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಪಾಯದ ಮಟ್ಟದಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದ್ದು ಜನ ಜೀವನ ಆಸ್ತವ್ಯಸ್ತಗೊಂಡಿದೆ.
ಪಟ್ಟಣದ ಸಮೀಪದ ಭೈರೆಗುಡ್ಡ ಹೊಳೆಬಾಗಿಲು ಎಂಬಲ್ಲಿ ನದಿಯ ಪ್ರವಾಹ ಐದು ಮನೆಗಳಿಗೆ ನುಗ್ಗುವ ಭೀತಿಯ ಹಿನ್ನೆಲೆಯಲ್ಲಿ ನರಸಿಂಹರಾಜಪುರದ ತಹಶೀಲ್ದಾರ್ ಕೃಷ್ಣಮೂರ್ತಿ, ಠಾಣಾಧಿಕಾರಿ ಟಿ.ಎಸ್.ಮಧು, ಉಪ ತಹಶೀಲ್ದಾರ್ ಮೋಹನ್, ಗ್ರಾಮ ಲೆಕ್ಕಿಗ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಅವರನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದರು.
ಚಿಕ್ಕಮಗಳೂರು-ಬಾಳೆಹೊನ್ನೂರು ಸಂಪರ್ಕ ಕಲ್ಪಿಸುವ ಭದ್ರಾ ಸೇತುವೆ ಸುತ್ತಮುತ್ತಲಿನ ಗದ್ದೆ ಮತ್ತುಅಡಿಕೆ ತೋಟಗಳಿಗೆ ಭದ್ರಾ ನದಿಯ ನೀರು ತುಂಬಿದ್ದು ಪ್ರವಾಹದ ಭೀತಿ ಎದುರಾಗಿದೆ.
ಮಳೆಯ ಪರಿಣಾಮ ಕಡ್ಲೆಮಕ್ಕಿ ಸಮೀಪದ ಕೃಷ್ಣಾಚಾರ್ ಎಂಬುವವರ ಮನೆಯ ಗೋಡೆ ಕುಸಿದು ಬ್ದ್ದಿದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಬುಧವಾರವೂ ಕೂಡ ಬಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಾಳೆಹೊನ್ನೂರು -ಕಳಸ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಕ್ಕೆ ನೀರು ನುಗ್ಗಿ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಸೀಗೋಡು ಕೆರೆ ಸಮೀಪ ಮರ ರಸ್ತೆಗೆ ಉರುಳಿದ ಪರಿಣಾಮ ಕೆಲ ಗಂಟೆಗಳ ಕಾಲ ಬಾಳೆಹೊನ್ನೂರು ಜಯಪುರ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಂದಾಯ, ಪೊಲೀಸ್ ಇಲಾಖೆ ಸಿಬ್ಬಂದಿ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.