ADVERTISEMENT

ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 11:07 IST
Last Updated 16 ಜುಲೈ 2013, 11:07 IST

ಕೊಪ್ಪ: ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯ ಮೆಕ್ಯಾನಿಕಲ್ ಮೋಟರ್ ವೆಹಿಕ್‌ಲ್ (ಎಂ.ಎಂ.ವಿ.) ವಿಭಾಗದಲ್ಲಿ ತರಬೇತಿ ಪೂರೈಸಿದ ಎಲ್ಲ 15 ವಿದ್ಯಾರ್ಥಿಗಳಿಗೆ ಮಂಗಳೂರಿನ ಟಿವಿಎಸ್ ಕಂಪನಿ ಉದ್ಯೋಗ ನೀಡಿ ಹೊಸ ಬದುಕು ಕಲ್ಪಿಸಿದೆ.

ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಈ ವಿದ್ಯಾರ್ಥಿಗಳ ವ್ಯಾಸಂಗದ ಅವಧಿಯಲ್ಲಿ ಉಚಿತವಾಗಿ ಬಸ್ ಪ್ರಯಾಣದ ಸೌಕರ್ಯ ಕಲ್ಪಿಸಿ, ಸಂಸ್ಥೆಯ ಗ್ಯಾರೇಜ್‌ನಲ್ಲಿ ಪ್ರಾಯೋಗಿಕ ತರಬೇತಿ ನೀಡಿದ್ದಲ್ಲದೆ ಟಿವಿಎಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸೋಮವಾರ ಐಟಿಐ ಸಂಸ್ಥೆಯಲ್ಲಿ ನಡೆದ ಉದ್ಯೋಗ ನೇಮಕಾತಿ ಪತ್ರ ನೀಡುವ ಸಮಾರಂಭದಲ್ಲಿ ಸಹಕಾರ ಸಾರಿಗೆ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ಮಾತನಾಡಿ, ಗುಣಮಟ್ಟದ ತಾಂತ್ರಿಕತೆಗೆ ಹೆಸರಾದ ಟಿವಿಎಸ್ ಕಂಪನಿಯಲ್ಲಿ ಉದ್ಯೋಗ ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ನಿಮ್ಮ ಓದಿಗೆ ತಂದೆ ತಾಯಿ ಪಟ್ಟ ಕಷ್ಟದ ನೆನಪಿರಲಿ, ಅವರಿಗೆ ಒಳ್ಳೆಯ ಹೆಸರು, ಸುಖ ಜೀವನ ನಿಮ್ಮಿಂದ ಸಿಗುವಂತಾಗಲಿ ಎಂದು ಹಾರೈಸಿದರು.

ಸರ್ಕಾರದ ಹುಸಿ ಉದ್ಯೋಗ ಭರವಸೆಯಿಂದಾಗಿ ಹತಾಶರಾದ ಯುವಜನತೆ ಅಡ್ಡದಾರಿ ಹಿಡಿಯುವಂತಾಗಿದೆ. ನಕ್ಸಲ್‌ನಂತಹ ಸಮಸ್ಯೆ ತಲೆಯೆತ್ತಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಟಿವಿಎಸ್ ಕಂಪನಿ 15 ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಿದ್ದರಿಂದ 15 ಕುಟುಂಬ ಬೆಳಗಿದಂತಾಗಿದೆ ಎಂದು ತಿಳಿಸಿ, ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗ ಟಿವಿಎಸ್ ಘಟಕದ ವ್ಯವಸ್ಥಾಪಕ ದತ್ತಾತ್ರೇಯ ಅವರು ಮಾತನಾಡಿ, ಸಂಸ್ಥೆಯ ಮಂಗಳೂರು ಘಟಕದಿಂದ ವಾರ್ಷಿಕ 40 ಯುವಕರಿಗೆ ಉದ್ಯೋಗ ನೀಡುತ್ತಿದ್ದು, ಕೊಪ್ಪದ ಐಟಿಐ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉದ್ಯೋಗ ನೀಡುವ ಭರವಸೆಯಿತ್ತರು.

ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ್ ಮಾತನಾಡಿ, ಸಂಸ್ಥೆಯಲ್ಲಿ 9 ಕೋರ್ಸ್ ನಡೆಸಲು ಅವಕಾಶವಿದ್ದು, ಉಪನ್ಯಾಸಕ, ಸಿಬ್ಬಂದಿ ಮತ್ತು ಪೂರಕ ಸೌಲಭ್ಯಗಳ ಕೊರತೆಯಿಂದ ಕೇವಲ 3 ಕೋರ್ಸ್ ಮಾತ್ರ ನಡೆಲಾಗುತ್ತಿದೆ. ಟಿವಿಎಸ್ ಸಂಸ್ಥೆ ಪ್ರತೀ ವರ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದಕ್ಕೆ ಕೃತಜ್ಞರಾಗಿದ್ದೇವೆ. ಬಿಎಚ್‌ಇಎಲ್ ಕಂಪನಿಯೂ ಉದ್ಯೋಗ ನೀಡಲು ಮುಂದೆ ಬಂದಿರುವುದರಿಂದ ಗ್ರಾಮೀಣ ಭಾಗದ ಯುವಜನತೆ ಈ ಸಂಸ್ಥೆಯಲ್ಲಿ ತರಬೇತಿ ಹೊಂದಿ ಉದ್ಯೋಗಾವಕಾಶ ಪಡೆಯಲು ಮುಂದಾಗಬೇಕು ಎಂದರು.

ಸಹಕಾರ ಸಾರಿಗೆ ಉಪಾಧ್ಯಕ್ಷ ಈ.ಎಸ್. ಧರ್ಮಪ್ಪ, ವ್ಯವಸ್ಥಾಪಕ ನಿರ್ದೇಶಕ ಗಾಡ್ವಿನ್ ಜಯಪ್ರಕಾಶ್, ಮಾಜಿ ಅಧ್ಯಕ್ಷ ಬಿ.ಎನ್. ಮಹೇಶ್ ಮಾತನಾಡಿ ಸಹಕಾರ ಸಾರಿಗೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವ ಕನಸು ಇಂದು ನನಸಾಗಿದೆ ಎಂದು ತಿಳಿಸಿ, ಉದ್ಯೋಗ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.